ಸಾಹಿತಿ ಹಾಗೂ ಹಿರಿಯ ಸಂಶೋಧಕ ಹ.ಕ.ರಾಜೇಗೌಡ ವಿಧಿವಶ
1 min readಮೈಸೂರು: ಮೈಸೂರಿನ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಿರಿಯ ಸಂಶೋಧಕ ಹ.ಕ.ರಾಜೇಗೌಡ ಅವರು ಗುರುವಾರ ಸಂಜೆ ವಿಧಿವಶರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಿರಿಯ ಸಂಶೋಧಕರಾಗಿ ಮಾತ್ರವಲ್ಲದೆ, ಎನ್ ಜಿಇಎಫ್ ನ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಗ್ರಂಥ ಸಂಪಾದನೆ, ಅನುವಾದ, ಇತಿಹಾಸ, ಜೀವನ ಚರಿತ್ರೆ, ನಾಟಕ, ಸಂಶೋಧನೆ, ವಿಮರ್ಶೆ, ಸಂಕಲನಗಳು, ಅಭಿನಂದನಾ ಗ್ರಂಥಗಳು ಸೇರಿದಂತೆ ಸುಮಾರು 62 ಕೃತಿಗಳನ್ನು ಸಂಪಾದಿಸಿದ್ದಾರೆ.
ಜಿಶಂಪ ಜಾನಪದ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಮ್.ಎಲ್.ಶ್ರೀಕಂಠೇಗೌಡ ಸಂಶೋಧನಾ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಎಚ್.ಡಿ.ಚೌಡಯ್ಯ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮೂಲತಃ ಕೆ.ಆರ್.ಪೇಟೆ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರಾದ ರಾಜೇಗೌಡರು, ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿರುವ ಮಗಳು ಚೇತನಾ ಬಾಲಕೃಷ್ಣ ಅವರೊಂದಿಗೆ ಇದ್ದರು. ಇವರು ಪುತ್ರ ದಿನೇಶ್ ಚಂದ್ರ ಹಾಗೂ ಅಳಿಯ ಐಪಿಎಸ್ ಅಧಿಕಾರಿ ಕೆ.ಟಿ.ಬಾಲಕೃಷ್ಣ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಹನುಮನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.