ಐಪಿಎಲ್ ಟೂರ್ನಿ: ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡಕ್ಕೆ 20 ರನ್ ಗಳ ಜಯ
1 min readದುಬೈ,ಸೆ.20-ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮತ್ತೆ ನಿನ್ನೆಯಿಂದ ಆರಂಭವಾಗಿದ್ದು, ದ್ವಿತೀಯಾರ್ಧದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ ಗಳ ಜಯಗಳಿಸಿದೆ.
ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್(88) ಸ್ಪೋಟಕ ಬ್ಯಾಟಿಂಗ್ ಹಾಗೂ ಡ್ವೇನ್ ಬ್ರಾವೊ (25ಕ್ಕೆ 3) ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಸಿಎಸ್ ಕೆ ತಂಡ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ್ದ ಸಿಎಸ್ ಕೆ 20 ಓವರ್ಗಳಿಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. 157 ರನ್ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಪರ ಸೌರಭ್ ತಿವಾರಿ ಬಿಟ್ಟರೆ ಇನ್ನುಳಿದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಒಂದು ತುದಿಯಲ್ಲಿ ಇನಿಂಗ್ಸ್ ಪೂರ್ತಿ ಬ್ಯಾಟ್ ಮಾಡಿದ ತಿವಾರಿ 40 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ ಅಜೇಯ 50 ರನ್ ಗಳಿಸಿದರೂ ಮುಂಬೈಗೆ ಗೆಲುವು ತಂದುಕೊಡುವಲ್ಲಿ ಸಾಧ್ಯವಾಗಲಿಲ್ಲ. ದೀಪಕ್ ಚಹರ್ (19ಕ್ಕೆ 2) ಹಾಗೂ ಡ್ವೇನ್ ಬ್ರಾವೊ ಪರಿಣಾಮಕಾರಿ ಬೌಲಿಂಗ್ಗೆ ನಲುಗಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 136 ರನ್ಗಳಿಗೆ ಆಲ್ ಔಟ್ ಆಯಿತು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ಟ್ರೆಂಟ್ ಬೌಲ್ಟ್ ಹಾಗೂ ಆಡಂ ಮಿಲ್ನೆ ಮಾರಕ ದಾಳಿಗೆ ನಲುಗಿ ಬಹುಬೇಗ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ, ಋತುರಾಜ್ ಗಾಯಕ್ವಾಡ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ತನ್ನ ಪಾಲಿನ 20 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಗಾಯಕ್ವಾಡ್ ಅರ್ಧಶತಕ: ಒಂದು ತುದಿಯಲ್ಲಿ ಕೊನೆಯವರೆಗೂ ಔಟಾಗದೆ ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್ ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟ್ ಮಾಡಿದ ಗಾಯಕ್ವಾಡ್, 58 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಮನ ಮೋಹಕ ಬೌಂಡರಿಗಳೊಂದಿಗೆ ಅಜೇಯ 88 ರನ್ ಗಳಿಸಿದರು. ಅಲ್ಲದೆ, ರವೀಂದ್ರ ಜಡೇಜಾ(26) ಜೊತೆ 80 ರನ್ ಮಹತ್ವದ ಜೊತೆಯಾಟವಾಡಿದ್ದರು. ಡೆತ್ ಓವರ್ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಡ್ವೇನ್ ಬ್ರಾವೊ ಕೇವಲ 8 ಎಸೆತಗಳಲ್ಲಿ ಮೂರು ಸಿಕ್ಸರ್ಗಳ ನೆರವಿನಿಂದ 23 ನಿರ್ಣಾಯಕ ರನ್ ಸಿಡಿಸಿದರು. ಆದರೆ, ಇದಕ್ಕೂ ಮುನ್ನ ಫಾಫ್ ಡುಪ್ಲೆಸಿಸ್, ಮೊಯಿನ್ ಅಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರೆ, ಅಂಬಾಟಿ ರಾಯುಡು(0) ಚೆಂಡು ತಗುಲಿಸಿಕೊಂಡು ಹೊರ ನಡೆದಿದ್ದರು. ರೈನಾ ಹಾಗೂ ಧೋನಿ ಕೂಡ ನಿರೀಕ್ಷೆ ಹುಸಿಗೊಳಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್, ಆಡಂ ಮಿಲ್ನೆ ಹಾಗೂ ಜಸ್ಪ್ರಿತ್ ಬುಮ್ರಾ ತಲಾ ಎರಡೆರಡು ವಿಕೆಟ್ಗಳನ್ನು ಪಡೆದುಕೊಂಡರು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಋತುರಾಜ್ ಗಾಯಕ್ವಾಡ್ ಪಡೆದುಕೊಂಡರು. ಸ್ಕೋರ್ ವಿವರ: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 156 (ಋತುರಾಜ್ ಗಾಯಕ್ವಾಡ್ ಅಜೇಯ 88, ರವೀಂದ್ರ ಜಡೇಜಾ 26, ಡ್ವೇನ್ ಬ್ರಾವೊ 23; ಟ್ರೆಂಟ್ ಬೌಲ್ಟ್ 35ಕ್ಕೆ 2, ಆಡಂ ಮಿಲ್ನೆ 21ಕ್ಕೆ 2 , ಜಸ್ಪ್ರಿತ್ ಬುಮ್ರಾ 33ಕ್ಕೆ 2)
ಮುಂಬೈ ಇಂಡಿಯನ್ಸ್: 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 136 (ಸೌರಭ್ ತಿವಾರಿ 50*, ಕ್ವಿಂಟನ್ ಡಿ ಕಾಕ್ 17; ಡ್ವೇನ್ ಬ್ರಾವೊ 25ಕ್ಕೆ 3, ದೀಪಕ್ ಚಹರ್ 19ಕ್ಕೆ 2, ಶಾರ್ದುಲ್ ಠಾಕೂರ್ 29ಕ್ಕೆ 1, ಜಾಶ್ ಹೇಝಲ್ವುಡ್ 34ಕ್ಕೆ 1.