ಮೈಸೂರಿನಲ್ಲಿ ಆಕ್ಸಿಜನ್ ಬೆಡ್, ಐಸಿಯು ಹೆಚ್ಚಳಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ
1 min readಮೈಸೂರು: ಆಕ್ಸಿಜನ್ ಬೆಡ್, ವೆಂಟಿಲೇಟರ್ ಹಾಗೂ ಐಸಿಯುಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ 19ರ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಸಾಮಾನ್ಯ ಹಾಸಿಗೆಗಳ ಲಭ್ಯತೆ ಸಾಕಷ್ಟು ಇದೆ. ಆದರೆ ಆಮ್ಲಜನಕಯುಕ್ತ ಹಾಸಿಗೆಗಳು, ವೆಂಟಿಲೇಟರ್‍ಗಳು ಹಾಗೂ ಐಸಿಯುಗಳಿಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳು ಹಾಗೂ ಸಾಸ್ಟ್‍ನಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಬೇಡಿಕೆ ಇರುವ ಆಕ್ಸಿಜನ್ ಪ್ರಮಾಣದ ಬಗ್ಗೆ ಮಾಹಿತಿ ಸಿಗುತ್ತಿದೆ. ಸಾಸ್ಟ್‍ನಲ್ಲಿ ಇಲ್ಲದ ಆಸ್ಪತ್ರೆಗಳೂ ಸಹ ಕೋವಿಡ್ ಚಿಕಿತ್ಸೆ ನೀಡುತ್ತಿದ್ದು, ಇದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಆಕ್ಸಿಜನ್ ಕೊರತೆಯಿಂದ ಸಾವು ಉಂಟಾಗದಂತೆ ಎಚ್ಚರವಹಿಸಬೇಕಾದ್ದು ಎಲ್ಲರ ಜವಬ್ದಾರಿಯಾಗಿದೆ. ಅಧಿಕಾರಿಗಳು ಆಕ್ಸಿಜನ್ ಅಗತ್ಯತೆಯ ಬಗ್ಗೆ ಸರಿಯಾದ ದಾಖಲಾತಿಗಳನ್ನು ಕೊಡಬೇಕು. ಅಗತ್ಯಕ್ಕೆ ತಕ್ಕಂತೆ ಜಿಲ್ಲೆಗೆ ಆಕ್ಸಿಜನ್ ತರುವ ಕೆಲಸವನ್ನು ಮಾಡಲಾಗುವುದು. ಆದರೆ ಅಧಿಕಾರಿಗಳು ಸರಿಯಾದ ದಾಖಲೆ ಹಾಗೂ ಮಾಹಿತಿ ಕೊಡದಿದ್ದರೆ ಸರ್ಕಾರದ ಹಂತದಲ್ಲಿ ಹೆಚ್ಚಿನ ಆಕ್ಸಿಜನ್ ಕೇಳಲು ಕಷ್ಟವಾಗುತ್ತದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಐಸಿಯು ಸಾಮಾಥ್ರ್ಯ ಹೆಚ್ಚಿಸಲು ಅವಕಾಶವಿದೆ. ಅದಕ್ಕೆ ಬೇಕಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಉಪಕರಣಗಳ ಬಗ್ಗೆ ಜಿಲ್ಲಾ ಟಾಸ್ಕ್‍ಫೋರ್ಸ್‍ನ ಸಲಹೆಗಾರರಾಗಿರುವ ಶಾಸಕರಾದ ಎಸ್.ಎ.ರಾಮದಾಸ್ ಹಾಗು 4ಜನ ಅಧಿಕಾರಿ ಹಾಗೂ ವೈದ್ಯರ ತಂಡ 2 ದಿನಗಳೊಳಗಾಗಿ ವರದಿ ನೀಡಲು ತಿಳಿಸಿದರು.
ಅಗತ್ಯ ಇಲ್ಲದವರೂ ಸಹ ಐಸಿಯು ಹಾಗೂ ಆಕ್ಸಿಜನ್ ಬೆಡ್ ಕೇಳುವುದರಿಂದ ಇವುಗಳ ಮೇಲೆ ಒತ್ತಡ ಹೆಚ್ಚಿದೆ. ಕೋವಿಡ್ ಮಿತ್ರದಲ್ಲಿ ಮೊದಲು ತಪಾಸಣೆ ನಡೆಸಿ ವೈದ್ಯರು ಶಿಫಾರಸ್ಸು ಮಾಡುವ ಸೋಂಕಿತರಿಗೆ ಆಕ್ಸಿಜನ್ ಬೆಡ್ ಹಾಗೂ ಐಸಿಯು ನೀಡಿದರೆ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.
ಔಷಧಿ ಖರೀದಿಸಲು ಈಗೀರುವ ಟೆಂಡರ್ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ. ಈ ವಿಳಂಬವನ್ನು ತಪ್ಪಿಸಲು ಔಷಧಿಯನ್ನು ಖರೀದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರೆ ಸೂಕ್ತ ಎಂದು ಶಾಸಕ ಎಸ್.ಎ.ರಾಮದಾಸ್ ಅವರು ಹೇಳಿದರು.
ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆ.ಎಲ್.ಆರ್.ಅಧ್ಯಕ್ಷ ಅಪ್ಪಣ್ಣ, ದೇವರಾಜ ಅರಸು ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಉಪವಿಭಾಗಾಧಿಕಾರಿಗಳಾದ ಡಾ.ಎನ್.ಸಿ.ವೆಂಕಟರಾಜು, ವೀಣಾ, ಡಿಎಚ್‍ಒ ಡಾ.ಟಿ.ಅಮರ್‍ನಾಥ್ ಸೇರಿದಂತೆ ಇತರರು ಹಾಜರಿದ್ದರು.