ಭರ್ತಿಯಾಗುವತ್ತ ಹಾರಂಗಿ ಡ್ಯಾಂ- 6 ಸಾವಿರ ಕ್ಯೂಸೆಕ್ಸ್ ನೀರು ನದಿಗೆ!
1 min readಕೊಡಗಿನಲ್ಲಿ ಮುಂಗಾರು ಅಬ್ಬರ ಶುರುವಾಗಿದ್ದು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು ಬುಧವಾರ ಸಂಜೆ ಜಲಾಶಯದಿಂದ ಬರೋಬ್ಬರಿ 6 ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಹೌದು ಡ್ಯಾಂ ಭತ್ತಿಯಾಗುವತ್ತ ಸಾಗಿದ್ದು ಸದ್ಯ ಹಾರಂಗಿ ಜಲಾಶಯದ 4 ಕ್ರಸ್ಟ್ ಗೇಟ್ ಗಳ ಮೂಲಕ 4 ಸಾವಿರ ಕ್ಯೂಸೆಕ್ಸ್ ಹಾಗೂ ವಿದ್ಯುತ್ ಉತ್ಪಾದನಾ ಘಟಕ ಮೂಲಕ 2000 ಕ್ಯುಸೆಕ್ ನೀರನ್ನ ನದಿಗೆ ಬಿಡಲಾಗಿದೆ.
- ಸದ್ಯ ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಹಟ್ಟಿಹೊಳೆ, ಕೂಟುಹೊಳೆ, ಹಾರಂಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, 19000 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಇದೀಗ 2859 ಅಡಿಗಳ ಜಲಾಶಯದಲ್ಲಿ 2853 ಅಡಿಯಷ್ಟು ನೀರು ತುಂಬಿದೆ. ಮಳೆಯ ಅಬ್ಬರ ಹೆಚ್ಚಾದರೆ ಜಲಾಶಯದಿಂದ ಇನ್ನಷ್ಟು ನೀರನ್ನು ಹೊರಬಿಡುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.