ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾಗೆ ಚಿಂತೆನೆ: ಜಿಡಿ ಹರೀಶ್‌ಗೌಡ!

1 min read

ಮೈಸೂರು: ‘ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ರೈತರ ಸಾಲ ಮನ್ನಾ ಮಾಡಲು ಚಿಂತನೆ, ಚರ್ಚೆ ನಡೆದಿದೆ’ ಎಂದು ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಭಾನುವಾರ ಇಲ್ಲಿ ತಿಳಿಸಿದರು.

‘ರಾಜ್ಯದ 21 ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರು, 2020ರ ಏ.1ರಿಂದ 2021ರ ಜೂನ್‌ 30ರವರೆಗೂ ಕೋವಿಡ್‌ನಿಂದ ಮೃತಪಟ್ಟಿದ್ದರೆ; ಅವರ ₹ 1ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಬೆಂಗಳೂರಿನಲ್ಲಿ ಜುಲೈ 2ರಂದು ನಡೆದ ಸಭೆಯಲ್ಲಿ, ಅಧ್ಯಕ್ಷರಾದ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಅವರನ್ನು ಒತ್ತಾಯಿಸಿದ್ದೇವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮಾಹಿತಿ ಸಂಗ್ರಹಿಸಿದ ಬಳಿಕ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಪೆಕ್ಸ್‌ ಬ್ಯಾಂಕ್‌, ಸಾಲ ಮನ್ನಾಗೆ ಮುಂದಾಗದಿದ್ದರೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ತನ್ನ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡಲಿದೆ’ ಎಂದು ಎಂಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಹರೀಶ್‌ಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಎಂಸಿಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರುವ 280 ಸದಸ್ಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರು ₹ 2.10 ಕೋಟಿ ಸಾಲ ಪಡೆದಿದ್ದು, ಅಪೆಕ್ಸ್‌ ಬ್ಯಾಂಕ್‌ನ ನಿರ್ಧಾರದ ಬಳಿಕ, ನಮ್ಮ ನಿಲುವು, ಎಷ್ಟು ಮೊತ್ತದ ಸಾಲ ಮನ್ನಾ ಮಾಡುತ್ತೇವೆ ಎಂಬುದನ್ನು ಪ್ರಕಟಿಸುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

About Author

Leave a Reply

Your email address will not be published. Required fields are marked *