ಕಾವೇರಿ ಹೋರಾಟಗಾರರು, ಹಿರಿಯ ಗಾಂಧಿವಾದಿ, ಮಾಜಿ ಸಂಸದ ಜಿ.ಮಾದೇಗೌಡ(93) ನಿಧನ
1 min readಮೈಸೂರು: ಕಾವೇರಿ ಹೋರಾಟಗಾರರು, ಹಿರಿಯ ಗಾಂಧಿವಾದಿ, ಮಾಜಿ ಸಂಸದ ಜಿ.ಮಾದೇಗೌಡ(93) ಇಂದು ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ರಾತ್ರಿ ನಿಧನರಾದರು.
ಮಂಡ್ಯದ ಬಂಧೀಗೌಡ ಬಡಾವಣೆ ನಿವಾಸಿಯಾಗಿದ್ದ ಮಾದೇಗೌಡರು, ಮದ್ದೂರು ತಾಲೂಕಿನ ಗುರುದೇವರ ಹಳ್ಳಿ ಗ್ರಾಮದವರು. ಮೃತರಿಗೆ ಪತ್ನಿ, ಡಾ. ಪ್ರಕಾಶ್, ಮಧು ಮಾದೇಗೌಡ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ ಇದ್ದಾರೆ.
ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980–83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ 1989 ಮತ್ತು 1991ರಲ್ಲಿ ಆಯ್ಕೆಗೊಂಡಿದ್ದರು. ಹಿರಿಯ ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.