ಮೈಸೂರು : ಆನೆ ದಾಳಿಗೆ ಅರಣ್ಯ ಇಲಾಖೆ ವಾಚರ್ ಸಾವು!
1 min read
ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್ ಮೃತಪಟ್ಟಿರುವ ಘಟನೆ ನಡೆದಿದೆ. ಆನೆ ದಾಳಿ ವೇಳೆ ಕುಸಿದು ಬಿದ್ದ ವಾಚರ್ ಹನುಮಂತಯ್ಯ (56) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಾಚರ್ ಆಗಿದ್ದ ಹನುಮಂತಯ್ಯರನ್ನ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ನಂಜಯ್ಯನ ಕಾಲೋನಿ ನಿವಾಸಿಯಾಗಿರುವ ಹನುಮಂತಯ್ಯ ರಾತ್ರಿ ಕಾಡಂಚಿನಲ್ಲಿ ಕಾವಲಿನಲ್ಲಿದ್ದರು. ಇವರ ಜೊತೆ ಮೂವರು ವಾಚರ್‌ಗಳು ಸಹ ಇದ್ದು, ಏಕಾಏಕಿ ಕಾಡಾನೆಯೊಂದು ಎದುರಾಗಿದೆ. ಈ ವೇಳೆ ದಿಕ್ಕಾಪಾಲಾದ ವಾಚರ್‌ಗಳು, ಆನೆಯನ್ನ ಹಿಮ್ಮೆಟ್ಟಿಸುವಷ್ಟರಲ್ಲಿ ಹನುಮಂತಯ್ಯ ಕುಸಿದು ಬಿದ್ದಿದ್ದಾರೆ. ಸದ್ಯ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.