ಮರಳಿ ಕಾಡಿಗೆ ಸೇರಲಿದ್ದಾನೆ ಕುಶ ಆನೆ

1 min read

ಬೆಂಗಳೂರು: ಅರಣ್ಯ ಇಲಾಖೆ ಸೆರೆಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ.

ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶ ನನ್ನು ಸೆರೆ ಹಿಡಿದು ತರಲಾಗಿತ್ತು, ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆ ಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಇಂದು ಸಭೆ ನಡೆಸಿ ಮಾಹಿತಿ ಪಡೆದರು. ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ‌. ಕುಶ ಆನೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು.

ಅಂತಿಮವಾಗಿ ಸಚಿವರು ಕುಶ ಆನೆಗೆ ರೋಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಬಿಡುಗಡೆಗೆ ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು.

ಇದೇ ಸಂದರ್ಭದಲ್ಲಿ ದುಬಾರೆ ಸಮೀಪ ಪ್ರಜ್ಞಾ ಚೌಟ ಎನ್ನುವವರು ಆನೆಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಕ್ತವಾಗಿರುವ ಆಕ್ಷೇಪಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅವರ ಸುಪರ್ದಿಯಲ್ಲಿರುವ ಆನೆಗಳನ್ನು ಇಲಾಖೆಯ ವಶಕ್ಕೆ ಪಡೆಯುವ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಭೆಯಲ್ಲಿ ಸಂಜಯ್ ಮೋಹನ್. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರು ಮತ್ತು ವಿಜಯಕುಮಾರ್ ಗೋಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ,) ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *