ದುಡಿಯುವ ವರ್ಗದವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
1 min readಬೆಂಗಳೂರು: ಬಾಣಂತಿಯವರು ಹಾಗೂ ಮಕ್ಕಳನ್ನು ಹೊರತು ಪಡಿಸಿ 18 ವರ್ಷ ಮೀರಿದ ಎಲ್ಲರಿಗೂ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
18 ವರ್ಷ ಮೀರಿದವರಿಗೆ ಮೇ ಒಂದರಿಂದ ಲಸಿಕೆ ನೀಡುವುದಾಗಿ ಪ್ರಧಾನಿಯವರು ಘೋಷಿಸಿದ್ದಾರೆ. ಇದೀಗ ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೊರೊನಾ ಸೋಂಕು ವ್ಯಾಪಕವಾಗದಂತೆ ತಡೆಯಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಉತ್ತಮ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹದಿನೆಂಟು ವರ್ಷ ಮೀರಿದವರಿಗೆ ಲಸಿಕೆ ನೀಡಲು ಎರಡು ಕೋಟಿ ವರೆಗೂ ಡೋಸ್ ಬೇಕಾಗುತ್ತದೆ. ಬಾಣಂತಿಯರು, ಮಕ್ಕಳನ್ನು ಹೊರತುಪಡಿಸಿ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ನೀಡಬೇಕು.
ದೇಶದಲ್ಲಿ ಲಸಿಕೆಗೆ ಕೊರತೆ ಇದೆ. ಆದರೆ, ಎಲ್ಲ ರಾಜ್ಯಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ಪೂರೈಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೋರೊನಾ ಸೋಂಕಿನಿಂದ ದೂರವಿರಲು 18 ವರ್ಷ ಮೀರಿದವರು ಲಸಿಕೆ ಪಡೆದುಕೊಳ್ಳಬೇಕು ಎಂದು ಜನರಲ್ಲಿ ನಾನು ಮನವಿ ಮಾಡುತ್ತೇನೆ. ಇದರಿಂದ ರೋಗ ಹರಡುವುದನ್ನು ತಪ್ಪಿಸಬಹುದು.
ಬೆಡ್ ಗಳ ಕೊರತೆ ನಿವಾರಿಸಿ :
ಐಸಿಯು ಬೆಡ್ ಗಳಿಗೆ ರಾಜ್ಯದಲ್ಲಿ ತೀವ್ರ ಕೊರತೆ ಇದೆ. ಬೆಂಗಳೂರಿನಲ್ಲಿಯೂ ಇದೇ ಪರಿಸ್ಥಿತಿ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಹಾಸಿಗೆಗಳಿವೆ. ಆದರೆ 65 ಹಾಸಿಗೆಗಳಿಗೆ ಮಾತ್ರ ಐಸಿಯು ಸೌಲಭ್ಯವಿದೆ. ಕನಿಷ್ಟ 250 ಬೆಡ್ ಗಳಿಗಾದರೂ ಐಸಿಯು ಸೌಲಭ್ಯ ಒದಗಿಸಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಜೊತೆಗೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಬೇಕು. ತಕ್ಷಣ ಆಸ್ಪತ್ರೆಗೆ 100 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ನಿವೃತ್ತ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನೂ ಈ ಸಂದರ್ಭದಲ್ಲಿ ಬಳಸಿಕೊಳ್ಳುವುದು ಸೂಕ್ತ.
ಬೆಂಗಳೂರಿನಲ್ಲಿ 22 ಸಾವಿರ ಮಂದಿ ನಿತ್ಯ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಇದು ಇನ್ನೂ ಐದು ಪಟ್ಟು ಹೆಚ್ಚಾಗಲಿದೆ ಎಂದು ಡಾ. ದೇವಿಪ್ರಸಾದ್ ಶೆಟ್ಟಿಯವರು ಹೇಳಿದ್ದಾರೆ. ಹೀಗಾಗಿ ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬೇಕು.
ಇದಕ್ಕೂ ಮೊದಲು ಸರ್ಕಾರ ಜನರು ಮತ್ತು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಹಲವಾರು ಸಲಹೆಗಳನ್ನು ನೀಡಿದ್ದೇನೆ. ಈ ಬಗ್ಗೆ ಸರ್ಕಾರ ಉದಾಸೀನ ಮಾಡಬಾರದು. ನೀಡಿರುವ ಸಲಹೆಗಳನ್ನು ಜಾರಿಗೆ ತರುವ ಕೆಲಸ ಆಗಬೇಕು.
ಪ್ಯಾಕೇಜ್ ಘೋಷಣೆ ಮಾಡಿ :
ಸರ್ಕಾರ ಈಗ 14 ದಿನಗಳ ಕರ್ಫ್ಯೂ ಜಾರಿಗೆ ತಂದಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಇದರಿಂದ ತೊಂದರೆಗೆ ಒಳಗಾಗುವ ಕೂಲಿ ಕಾರ್ಮಿಕರು, ನಿತ್ಯದ ದುಡಿಗೆ ಅವಲಂಬಿಸಿರುವ ಜನರಿಗೆ ಪ್ಯಾಕೇಜ್ ಘೋಷಿಸಬೇಕು. ಹತ್ತು ಕೆಜಿ ಆಹಾರ ಧಾನ್ಯ, ಒಂದು ಕುಟುಂಬಕ್ಕೆ ಹತ್ತು ಸಾವಿರ ರೂ.ಗಳ ಹಣಕಾಸು ನೆರವು ಒದಗಿಸಬೇಕು. ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ. ಅವರಿಗೆ ಅವರ ಹಳ್ಳಿಗಳಲ್ಲಿ ಉದ್ಯೋಗ ಸಿಗುವಂತೆ ಮಾಡಬೇಕು. ಇದಕ್ಕಾಗಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಳಸಿಕೊಳ್ಳಬೇಕು.
ಸತ್ಯ ಹೇಳಿದರೆ ಟೀಕೆ ಎನ್ನುವುದೇಕೆ ?
ಕೊರೊನಾ ಸಂದರ್ಭದಲ್ಲಿ ಸಿದ್ದರಾಮಯ್ಯ ಟೀಕೆ ಮಾಡುತ್ತಾರೆ ಎಂದು ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಸತ್ಯ ಹೇಳಿದರೆ ಟೀಕೆ ಎನ್ನುವುದೇಕೆ ? ಶವಸಂಸ್ಕಾರಕ್ಕೂ ಜನ ಪರದಾಡುತ್ತಿರುವುದು ಸತ್ಯ ಅಲ್ಲವೇ ? ಅದನ್ನು ಸರ್ಕಾರದ ಗಮನಕ್ಕೆ ತಂದರೆ ಟೀಕೆ ಎಂದು ಭಾವಿಸುವುದೇಕೆ ?
ಕತ್ತಿ ಅವರನ್ನು ವಜಾ ಮಾಡಿ :
ಕೇಂದ್ರ ಸರ್ಕಾರ ಆಹಾರ ಧಾನ್ಯ ಕೊಡುವ ವರೆಗೆ ಉಪವಾಸ ಬಿದ್ದು ಸಾಯಬೇಕೆ ಎಂದು ಕೇಳಿದವರಿಗೆ ಸಾಯುವುದೇ ಉತ್ತಮ ಎಂದು ಸಚಿವ ಉಮೇಶ್ ಕತ್ತಿಯವರು ಹೇಳಿದ್ದಾರೆ. ಇದು ಉದ್ಧಟತನ ಮತ್ತು ದುರಹಂಕಾರದ ಮಾತು. ಮಂತ್ರಿಯಾಗಿ ಮುಂದುವರಿಯಲು ಅವರು ನಾಲಾಯಕ್.
ಮಂತ್ರಿಗಳ ಪರವಾಗಿ ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿವುದಲ್ಲ. ಕೂಡಲೇ ಕತ್ತಿಯವರನ್ನು ವಜಾ ಮಾಡಬೇಕು. ಇಂತಹ ಮಂತ್ರಿಗಳಿಂದ ಜನರಿಗೆ ರಕ್ಷಣೆ ಸಿಗುವುದಾದರೂ ಹೇಗೆ ?
ನಮ್ಮ ಸರ್ಕಾರದ ಇದ್ದಾಗ ಬಡ ಕುಟುಂಬಗಳಿಗೆ ಒಬ್ಬರಿಗೆ ಏಳು ಕೆಜಿ ಪ್ರಕಾರ ಅಕ್ಕಿ ನೀಡಲಾಗುತ್ತಿತ್ತು. ಈಗ ಅಕ್ಕಿಪ್ರಮಾಣ ಕಡಿಮೆ ಮಾಡುವುದರ ಜೊತೆಗೆ ನಾವೂ ಏನೂ ಮಾಡಲಾಗದು ಸಾಯಿರಿ ಎಂದು ಹೇಳುವ ಮಟ್ಟಕ್ಕೆ ಸಚಿವರು ಬಂದಿದ್ದಾರೆ. ಸಚಿವರ ಇಂತಹ ಹೇಳಿಕೆ ಖಂಡನೀಯ. ಕತ್ತಿ ಅವರನ್ನು ಮಂತ್ರಿ ಮಂಡಲದಿಂದ ಕೂಡಲೇ ಕೈ ಬಿಡಬೇಕು ಎಂದು ನಾನು ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ.
ಇದು ಅತ್ಯಂತ ಬೇಜವಾಬ್ದಾರಿಯುತ ಸರ್ಕಾರ. ಇಂತಹ ಮಂತ್ರಿಗಳನ್ನು ಯಡಿಯೂರಪ್ಪ ಅವರು ಸಹಿಸಿಕೊಳ್ಳುವುದನ್ನು ಬಿಟ್ಟು ರಾಜಿನಾಮೆ ಪಡೆಯುವುದು ಉತ್ತಮ.
ಹತ್ತು ಕೆಜಿ ಅಕ್ಕಿ ಕೊಡಿ :
ಬಡ ಕುಟುಂಬಗಳಿಗೆ ವ್ಯಕ್ತಿಗೆ ಹತ್ತು ಕೆಜಿ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ರಾಜ್ಯದ ಜನರನ್ನು ರಕ್ಷಿಸುವ ದೃಷ್ಟಿಯಿಂದ ಹತ್ತು ಕೆಜಿ ನೀಡುವುದು ಒಳ್ಳೆಯದೇ ಅಲ್ಲವೇ ? ಏಳು ಕೆಜಿ ಅಕ್ಕಿ, ಮೂರು ಕೆಜಿ ರಾಗಿ ಕೊಡಲಿ. ರಾಗಿ ಬೇಡ ಎನ್ನುವವರಿಗೆ ಹತ್ತು ಕೆಜಿ ಪ್ರಕಾರ ಅಕ್ಕಿಯನ್ನೇ ವಿತರಿಸಲಿ. ಜೋಳ, ರಾಗಿ ಕೊಡಿ ಎಂದು ಜನ ಕೇಳಿರಲಿಲ್ಲ.
ಎರಡನೇ ಡೋಸ್ ತೆಗೆದುಕೊಂಡೆ :
ನಾನು ಆರು ವಾರಗಳ ಹಿಂದೆ ಕೋವಿಡ್ ನ ಮೊದಲನೇ ಡೋಸ್ ಹಾಕಿಕೊಂಡಿದ್ದೆ. ಇಂದು ಎರಡನೇ ಡೋಸ್ ಪಡೆದುಕೊಂಡಿದ್ದೇನೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ,. ಸ್ಯಾನಿಟೈಸರ್ ಬಳಕೆ ಮಾಡಿ ಎಂದು ರಾಜ್ಯದ ಜನರಲ್ಲಿ ನಾನು ಕೈ ಮುಗಿದು ಮನವಿ ಮಾಡುತ್ತೇನೆ. ಸರ್ಕಾರ ಸಹ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯ ಮಾಡಬೇಕು. ಜೊತೆಗೆ ಎಲ್ಲರೂ ಲಸಿಕೆ ಪಡೆಯುವಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.
ಶಾಸಕರಾದ ರಾಜಶೇಖರ ಪಾಟೀಲ, ಬೈರತಿ ಸುರೇಶ್, ನಂಜೇಗೌಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.