ಜನಸಾಮಾನ್ಯರ ಕಷ್ಟಗಳಿಗೆ ಧನಾತ್ಮಕ ಪರಿಹಾರ ದೊರೆಯಲಿ: ಜಯರಾಂ

1 min read

ಮೈಸೂರು: ಕೋವಿಡ್ ಕಾರಣದಿಂದ ಜನಸಾಮಾನ್ಯರಿಗೆ ಕಚೇರಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಹಾಗೂ ಅವರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಫೋನ್ ಇನ್ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನ ಸಾಮಾನ್ಯರ ಕಷ್ಟಗಳಿಗೆ ಧನಾತ್ಮಕವಾಗಿ ಪರಿಹಾರ ನೀಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಜಯರಾಂ ಅವರು ಅಧಿಕಾರಿಗಳಿಗೆ ತಿಳಿಸಿದರು.

ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನೆಯ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಸ್ತಿತ್ವದಲ್ಲಿ ಇದ್ದ ಸಂದರ್ಭದಲ್ಲಿ ಜನನಾಯಕರು ಜನರ ಕೈಗೆ ಸಿಗುತ್ತಿದ್ದರು. ಇದರಿಂದ ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸುಲಭವಾಗುತ್ತಿತ್ತು ಎಂದರು.

ಕೋವಿಡ್ ಕಾರಣದಿಂದ‌ ಇಂದು ಪರಿಸ್ಥಿತಿ ಬದಲಾಗಿದ್ದು, ಜನರ ನೆರವಿಗಾಗಿ ಕೆಲಸ ಮಾಡಲೇಬೇಕಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಸ್ಪಂದಿಸಲು ಯಾರು ಇಲ್ಲ ಎಂಬ ಭಾವನೆ ಜನಸಾಮನ್ಯರಲ್ಲಿ ಇರಬಾರದು. ಹೀಗಾಗಿ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಹೊಸ ಹಣಕಾಸಿನ ವರ್ಷ ಪ್ರಾರಂಭವಾಗುತ್ತಿದೆ. ಹೀಗಾಗಿ ಇಲಾಖೆಗಳು ಹೊಸ ಹೊಸ ಯೋಜನೆಗಳನ್ನು ಸೂಕ್ತ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಾರ್ಯರೂಪಕ್ಕೆ ತರಲು ಪ್ರಾರಂಭಿಸಬೇಕು ಎಂದು ತಿಳಿಸಿದರು.

ಜೂನ್ ಮಾಹೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪ್ರತಿದಿನ ಆನ್ ಲೈನ್ ಮೂಲಕ ಪಾಠಗಳನ್ನು ಮಾಡುವುದರ ಬಗ್ಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮಕ್ಕಳಿಗೆ ಮಾರ್ಗದರ್ಶನ ಸಿಗುತ್ತಿರುವುದರ ಬಗ್ಗೆ ವಿಚಾರಿಸಿದರು.

ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಧವಸ ಧಾನ್ಯಗಳು ಉತ್ತಮ ರೀತಿಯಲ್ಲಿ ಸಿಗುವಂತೆ ನೋಡಿಕೊಳ್ಳಿ ಹಾಗೂ ಖಾತರಿ ಪಡಿಸಿಕೊಳ್ಳಿ ಎಂದರು. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸ್ಥಳವಕಾಶ ಇದೆ. ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಗರ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಆದಷ್ಟು ಬೇಗ ಭರ್ತಿ ಮಾಡಲು ಸೂಚಿಸಿದರು. ನಿವೃತ್ತಿಯಾದಂತಹ ವೈದರನ್ನೂ ಸಹ ಕರೆದುಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ.ಯೋಗೀಶ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಉಪ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್, ಡಾ.ಕೃಷ್ಣರಾಜು, ಮುಖ್ಯಯೋಜನಾಧಿಕಾರಿ ಎಸ್.ಧನುಷ್, ಉಪನಿರ್ದೇಶಕರಾದ ಪ್ರಕಾಶ್, ಸೇರಿದಂತೆ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *