ಖಾಸಗಿ ಆಸ್ಪತ್ರೆಗಳಿಗೆ ನೇಮಿಸಿದ ನೋಡಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min readಮೈಸೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ಹಾಸಿಗೆಗಳಿಗೆ ಜಿಲ್ಲಾಡಳಿತ ನಿಯೋಜಿಸುವ ಸೋಂಕಿತರಿಗೆ ಹಾಸಿಗೆ ಕೊಡಿಸಲು ಸರಿಯಾಗಿ ಸಮನ್ವಯ ಮಾಡದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಹಾಗೂ ಸಾಸ್ಟ್ (SAST)ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು ವಾರ್ ರೂಂನಿಂದ ಸೋಂಕಿತರಿಗೆ ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಅದೇ ವ್ಯಕ್ತಿಗೆ ಹಾಸಿಗೆ ಕೊಡಿಸುವ ವರೆಗೂ ಈ ನೋಡಲ್ ಅಧಿಕಾರಿಗಳು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಪ್ರತಿನಿಧಿಗಳ ಜವಾಬ್ದಾರಿ ಇದೆ ಎಂದರು.
ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ ಪಾವತಿಸಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಅಂತಹ ರೋಗಿಗಳಿಗೆ ಸರ್ಕಾರಿ ಕೋಟಾದ ಹಾಸಿಗೆ ಕೊಡಿಸಬೇಕು ಎಂದರು.
ಸರ್ಕಾರಿ ಕೋಟಾದ ಹಾಸಿಗೆಗೆ ಯಾವ ರೋಗಿಯನ್ನು ನಿಯೋಜಿಸಿದ ರೋಗಿ ಡಿಸ್ಚಾರ್ಜ್ ಆದ ಮಾಹಿತಿಯನ್ನು ವಾರ್ ರೂಂಗೆ ನೀಡಬೇಕು. ಈ ಮಾಹಿತಿ ಸರಿಯಾಗಿ ಸಿಗದಿರುವುದರಿಂದ ಹಲವಾರು ಸಮಸ್ಯೆಗಳಾಗಿವೆ ಎಂದರು.
ಸರ್ಕಾರಿ ಕೋಟಾದ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಹಣ ವಸೂಲಿ ಮಾಡಿದರೆ ಕೆ.ಪಿ.ಎಂ.ಇ. ಕಾಯ್ದೆಯಡಿ ಆಸ್ಪತ್ರೆ ವಿರುದ್ಧ ಹಾಗೂ ವಿಕೋಪ ನಿರ್ವಹಣ ಕಾಯ್ದೆಯಡಿ ನೋಡಲ್ ಅಧಿಕಾರಿಗಳು ಮತ್ತು ಸಾಸ್ಟ್ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಯೊಂದು ಆಸ್ಪತ್ರೆಗೆ ಒಬ್ಬರು ನೋಡಲ್ ಅಧಿಕಾರಿ, ಒಬ್ಬರು ಸಾಸ್ಟ್ ಪ್ರತಿನಿಧಿ, ಒಬ್ಬರು ಸೆಸ್ಡ್ ಅಧಿಕಾರಿ ಹಾಗೂ ಒಬ್ಬರು ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ರಚಿಸಿರುವ ತಂಡ ಸಮರ್ಪಕವಾಗಿ ಕೆಲಸ ಮಾಡಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಯ ಕೋಟಾ ಮತ್ತು ಸರ್ಕಾರದ ಕೋಟಾ ಎರಡರಲ್ಲೂ ಲಭ್ಯವಿರುವ ಬೆಡ್ಗಳ ಮಾಹಿತಿಯನ್ನು ಪ್ರತಿದಿನ ಕೊಡಬೇಕು ಎಂದು ತಿಳಿಸಿದರು.