ವೈಭವದ ದೀಪಾಲಂಕಾರ: ಅ.6 ರಂದು ಉದ್ಘಾಟನೆ; ಸಚಿವ ಸುನೀಲ್ ಕುಮಾರ್

1 min read

ಮೈಸೂರು,ಅ.1-ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು. ನಗರದ ಎಲ್ಲಾ ಪ್ರವೇಶದ್ವಾರಗಳಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಮುಖ ರಸ್ತೆಗಳಲ್ಲಿ, ಚೆಸ್ಕಾಂನಿಂದ ದೀಪಾಲಂಕಾರ ಮಾಡಲಾಗುತ್ತದೆ. 2019 ರಲ್ಲಿ ವೈಭವದ ದೀಪಾಲಂಕಾರದ ರೀತಿಯಲ್ಲಿ 2021 ರಲ್ಲೂ ವೈಭವದ ದೀಪಾಲಂಕಾರ ಯೋಚನೆ ಮಾಡಿ ಶೇ. 80 ರಷ್ಟು ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಆ‌ ಹಿನ್ನೆಲೆಯಲ್ಲಿ 80 ರಿಂದ 100 ಕಿ.ಮೀ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗುತ್ತಿದ್ದು, ಸಿದ್ಧತೆ ನಡೆಯುತ್ತಿದೆ‌ ಎಂದರು.
ಅ.6ರಂದು ಸಂಜೆ 6 ಗಂಟೆಗೆ ದೀಪಾಲಂಕಾರಗಳ ಉದ್ಘಾಟನೆಯಾಗಲಿದೆ. ಅಂದು ಮಾನ್ಯ ಮುಖ್ಯಮಂತ್ರಿಗಳು ಆಗಮಿಸಲಿದ್ದು, ದೀಪಾಲಂಕಾರಗಳನ್ನು ವೀಕ್ಷಿಸಲಿದ್ದಾರೆ. ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರ ಇರಲಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ದೀಪಾಲಂಕಾರಕ್ಕೆ ಪರಿಸರ ಸ್ನೇಹಿ ಎಲ್ ಇಡಿ ಬಳಕೆ ಮಾಡಲಾಗುತ್ತದೆ. 100 ಕಿ.ಮೀ.ನಷ್ಟು ದೀಪಾಲಂಕಾರ ಮಾಡಲಾಗುವುದು. 41 ಸರ್ಕಲ್‌ ಗಳಲ್ಲಿ ಅಂಬಾರಿ, ವಿಧಾನಸೌಧ, ಕೆಆರ್ ಎಸ್ ಪ್ರತಿಕೃತಿಗಳ ದೀಪಾಲಂಕಾರ ಮಾಡಲಾಗುತ್ತದೆ. ಇನ್ನೆರಡು ದಿನದಲ್ಲಿ ದೀಪಾಲಂಕಾರ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ದಸರಾ ಉತ್ಸವವನ್ನು ಭಾವನಾತ್ಮಕವಾಗಿ ಯಶಸ್ವಿಗೊಳಿಸುವ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಆಗಿದೆ. ಅರಮನೆ ಆವರಣದ ವೇದಿಕೆಯಲ್ಲಿ ಸಂಜೆ 6 ರಿಂದ‌ 9.30 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದರು.
ಅ.10 ರಂದು ಸೂರ್ಯೋದಯದಿಂದ‌ ಸೂರ್ಯಾಸ್ತದ ವರೆಗೆ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಲಾಮಂದಿರದ ವೇದಿಕೆಯಲ್ಲಿ ಅ.11, 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದ್ದು, ತಯಾರಿ ನಡೆದಿದ್ದು, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಅ.7 ರಿಂದ13ನೇ ತಾರೀಖಿನವರೆಗೆ ಸಂಜೆ7 ರಿಂದ 9 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕೋವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಕಟ್ಟುಪಾಡುಗಳ ಜೊತೆಗೆ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರಬೇಕು ಎಂದು ಮನವಿ ಮಾಡಿದರು.

About Author

Leave a Reply

Your email address will not be published. Required fields are marked *