ಮೈಸೂರು ವಿಭಾಗದ 18-44 ವರ್ಷದೊಳಗಿನ ರೈಲ್ವೆ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲೆ ಲಸಿಕಾ ಕಾರ್ಯಕ್ರಮ

1 min read

ಮೈಸೂರು: ಕೊರೋನಾವನ್ನು ತಡೆಗಟ್ಟುವ ನಿರ್ಣಾಯಕ ಕಾಳಗದಲ್ಲಿ ಲಸಿಕೆ ಹಾಕುವ ವೇಗವನ್ನು ಸುಧಾರಿಸುವ ದಿಕ್ಕಿನಲ್ಲಿ, ವಿಭಾಗೀಯ ಕಛೇರಿಯಲ್ಲಿ ಕೆಲಸ ಮಾಡುವ ಮತ್ತು ಮೊದಲ ಸುತ್ತಿನಲ್ಲಿ ಲಸಿಕೆ ಹಾಕಿಕೊಳ್ಳದ 18-44 ವರ್ಷ ವಯಸ್ಸಿನ ಸಿಬ್ಬಂದಿಗೆ ಪ್ರಥಮ ಲಸಿಕೆ ಚುಚ್ಚುಮದ್ದು ಹಾಕುವ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿತು. ನೈಋತ್ಯ ರೈಲ್ವೆ ಆಸ್ಪತ್ರೆಯು ಅರ್ಹ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳುವ ಮೂಲಕ ಲಸಿಕೆ ನೀಡಲಿದೆ.

ಕೋವಿಡ್ 19 ರ ಎರಡನೇ ಅಲೆಯ ನಡುವೆಯೂ ರೈಲ್ವೆ, ಸರಕು ಮತ್ತು ಪ್ರಯಾಣಿಕರ ರೈಲುಗಳ ಸೇವೆ ಒದಗಿಸುತ್ತಿದೆ. ಹಾಗಾಗಿ ರೈಲ್ವೆಯನ್ನು ಸಂರಕ್ಷಿಸಿಕೊಳ್ಳುವುದು ಹಾಗು ರೈಲ್ವೆಯ ಸೇವೆಯು ಅವ್ಯಾಹತವಾಗಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ವಿಭಾಗದ ಎಲ್ಲಾ ಅರ್ಹ ರೈಲ್ವೆ ಸಿಬ್ಬಂದಿಗೆ ಲಸಿಕೆ ನೀಡಲು ಆದ್ಯತೆ ನೀಡಿರುವ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ಕೈಗೊಂಡ ಉಪಕ್ರಮದ ಕಾರಣವಾಗಿ, ದಿನಾಂಕ 31.5.2021 ರವರೆಗೆ ಸುಮಾರು 79% ಅರ್ಹ ಸಿಬ್ಬಂದಿಗಳಿಗೆ ಈಗಾಗಲೇ ಲಸಿಕೆ ಚುಚ್ಚುಮದ್ದು ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಉಳಿದ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು.

ಇದೇ ಸಮಯದಲ್ಲಿ, ರಕ್ಷಣೆ ಪಡೆಯುವ ವಿಷಯದಲ್ಲಿ ಯಾರೂ ತಪ್ಪಿಹೋಗದಂತೆ ತಡೆಯಲು ಸಿಬ್ಬಂದಿಗಳ ಅನುಕೂಲಕ್ಕಾಗಿ ಚಿಕ್ಕಜಾಜೂರು ಮತ್ತು ಹರಿಹರ ರೈಲ್ವೆ ನಿಲ್ದಾಣಗಳಲ್ಲಿ ಸಹ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ.

ಇದರ ಜೊತೆಯಲ್ಲಿಯೇ, 18-44 ವರ್ಷ ವಯಸ್ಸಿನ 1400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಂತೆ ಸುಮಾರು 2000 ಉದ್ಯೋಗಿಗಳನ್ನು ಹೊಂದಿರುವ ಅಶೋಕಪುರಂ ಕಾರ್ಯಾಗಾರದಲ್ಲಿಯೂ ಸಹ ಇದೇ ರೀತಿಯ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. 45 ವರ್ಷಕ್ಕಿಂತ ಮೇಲ್ಪಟ್ಟ 576 ಉದ್ಯೋಗಿಗಳಲ್ಲಿ 550 ಕ್ಕೂ ಹೆಚ್ಚು ಜನರು ಈಗಾಗಲೇ ತಮ್ಮ ಮೊದಲ ಪ್ರಮಾಣದ ಲಸಿಕೆ ಚುಚ್ಚುಮದ್ದು ಪಡೆದಿದ್ದಾರೆ. ಉಳಿದ ಅರ್ಹ ಸಿಬ್ಬಂದಿಯನ್ನು ಪ್ರಸ್ತುತದ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು.

ಮುಖಕವಚ ಸರಿಯಾಗಿ ಧರಿಸುವುದು, 2 ಮೀಟರ್ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆಗಾಗ್ಗೆ ಕೈ ತೊಳೆಯುವುದು ಮುಂತಾದ ಮೂಲ ಕೋವಿಡ್ ನಿಯಮಗಳು ಅದೃಶ್ಯ ಶತ್ರುವಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಆಯುಧಗಳಾಗಿವೆ ಎಂದು ಶ್ರೀ ರಾಹುಲ್ ಅಗರ್ವಾಲ್ ಮತ್ತೊಮ್ಮೆ ಪುನರುಚ್ಚರಿಸಿದರು. ಎರಡನೇ ಅಲೆಯೊಂದಿಗಿನ ಯುದ್ಧವು ಇನ್ನೂ ಮುಗಿದಿಲ್ಲ ಮತ್ತು ಆದ್ದರಿಂದಾಗಿ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಒತ್ತಿ ಹೇಳಿದರು. ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಗೆ ಕಿವಿಗೊಡದಂತೆ ಅವರು ಸಿಬ್ಬಂದಿಗೆ ಕರೆ ನೀಡಿ, ಲಸಿಕೆ ಹಿಂಜರಿಕೆಯನ್ನು ಹೋಗಲಾಡಿಸಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಅಭೂತಪೂರ್ವವಾಗಿ ಬಂದಿರುವ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ತೀವ್ರ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಉತ್ತಮ ಸೇವೆ ನೀಡುತ್ತಿರುವ ಎಲ್ಲಾ ವೈದ್ಯಕೀಯ ಮತ್ತು ಮುಂಚೂಣಿ ಸಿಬ್ಬಂದಿಯನ್ನು ಶ್ರೀ ಅಗರ್ವಾಲ್ ರವರು ಅಭಿನಂದಿಸಿದರು.

About Author

Leave a Reply

Your email address will not be published. Required fields are marked *