ಮಕ್ಕಳಿಗೆ ಬುದ್ಧಿ ಹೇಳುವ ಶಿಕ್ಷಕರೇ ಮಾಡಿದ್ರು ರೂಲ್ಸ್ ಬ್ರೇಕ್!
1 min readಮೈಸೂರು: ಹುಣಸೂರಿನ ಶಿಕ್ಷಕರ ಭವನದಲ್ಲಿ ಇಂದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ಶಿಕ್ಷಕರು ಯಾವುದೇ ಅಂತರವಿಲ್ಲದೆ, ಸರಿಯಾದ ಮಾಸ್ಕ್ ಧರಿಸದೇ ಲಸಿಕೆ ಪಡೆಯಲು ತಾಮುಂದು ನಾಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇದನ್ನು ಕಂಡ ಹುಣಸೂರು ಸ್ನೇಹ ಬಳಗದ ಅಧ್ಯಕ್ಷರಾದ ವಕೀಲ ಪುಟ್ಟರಾಜುರವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿ ಹೇಳುವ ಶಿಕ್ಷಕರೇ ಈ ರೀತಿ ಯಾವುದೇ ಅಂತರವನ್ನು ಪಾಲಿಸದೆ ಅನಕ್ಷರಸ್ಥ ರಂತೆ ನಡೆದುಕೊಳ್ಳುವುದರಿಂದ ಹುಣಸೂರಿನಲ್ಲಿ ಕೊರೋನಾ ಹೆಚ್ಚಾಗಲು ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಮಕ್ಕಳಿಗೆ ಹಾಗೂ ಅನಕ್ಷರಸ್ಥರಿಗೆ ಶಿಕ್ಷಣ ನೀಡುವ ಶಿಕ್ಷಕರು ನೀವೇ ಈ ರೀತಿಯಾಗಿ ಯಾವುದೇ ಅಂತರವನ್ನು ಕಾಯ್ದುಕೊಳ್ಳದೆ ಇರುವುದರಿಂದ ನಿಮಗೆ ಹಾಗೂ ನಿಮ್ಮ ಮನೆಯ ಕುಟುಂಬಸ್ಥರಿಗೆ ಕರೋನಾ ಬಂದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದಕ್ಕೆ ನಯವಾಗಿಯೇ ಉತ್ತರ ನೀಡಿ ಜಾರಿಕೊಂಡ ಬಿಇಓ ನಾಗರಾಜು ಅವರು ನನಗೂ ಈ ಅಭಿಯಾನಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಅಲ್ಲದೆ ಬೇರೆ ಕಲ್ಯಾಣ ಮಂಟಪಗಳಲ್ಲಿ ಈ ರೀತಿಯಾಗಿ ಗುಂಪುಗೂಡುವಿಕೆ ಯನ್ನು ಕಂಡರೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಆದರೆ ವಿದ್ಯಾವಂತ ಶಿಕ್ಷಕರೇ ಈ ರೀತಿಯಾಗಿ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳುವವರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮತ್ತಷ್ಟು ಸಮಸ್ಯೆ ಆಗಲಿದೆ ಎಂದು ಎಚ್ಚರಿಸಿದರು.