ಬ್ಲಾಕ್ ಫಂಗಸ್ ಹಿನ್ನೆಲೆ: ಕೋಮಾರ್ಬಿಡಿಟಿಸ್ ಕಾಯಿಲೆ ಇರುವವರ ಮೇಲೆ ಹೆಚ್ಚು ನಿಗಾವಹಿಸಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

1 min read

ಮೈಸೂರು: ದೀರ್ಘಕಾಲಿನ ಖಾಯಿಲೆಗಳು (ಕೋಮಾರ್ಬಿಡಿಟಿಸ್) ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚು, ಅಂತಹವರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ 2.4 ಲಕ್ಷ ಜನರಿದ್ದಾರೆ. ಇವರಲ್ಲಿ 64,473 ಜನರಿಗೆ ಹೈಪರ್‌ಟೆನ್ಸನ್, 75056 ಜನರಿಗೆ ಡಯಾಬಿಟಿಸ್, 10226 ಜನರಿಗೆ ಹೃದಯ ಸಂಬಂಧಿ ಕಾಯಿಲೆ, 906 ಜನರಿಗೆ ಕ್ಯಾನ್ಸರ್, 546 ಜನರಿಗೆ ಕಿಡ್ನಿ ಕಾಯಿಲೆ, 162 ಜನರಿಗೆ ಡಯಾಲಿಸಿಸ್ ಆಗುತ್ತಿದೆ. ಇಂತಹ ಮೇಲೆ ನಿಗಾವಹಿಸಬೇಕು ಎಂದು ಸೋಮವಾರ ವೀಡಿಯೋ ಸಂವಾದ ನಡೆಸಿ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದರು.

ಮನೆ ಮನೆ ಸಮೀಕ್ಷೆ ನಡೆಸುವಾಗ ಈ ಕೋಮಾರ್ಬಿಡಿಟಿಸ್ ಇರುವವರ ಬಗ್ಗೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಟೆಸ್ಟಿಂಗ್ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಯಾರಲ್ಲಿ ಇಮ್ಯೂನಿಟಿ ಪವರ್ ಕಡಿಮೆ ಇರುತ್ತದೆಯೋ ಹಾಗೂ ಕೋವಿಡ್ ನಿಂದ ಗುಣಮುಖವಾಗಿರುವವರಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅವರಿಗೆ ಯಾವ ಯಾವ ಪೌಷ್ಠಿಕಾಂಶದ ಆಹಾರಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಹೇಳಿದರು.

ಮೈಸೂರಿನಲ್ಲಿ ದೀರ್ಘಕಾಲಿನ ಖಾಯಿಲೆ ಇರುವವರ ಪಟ್ಟಿ

ಬೆಂಗಳೂರಿನಲ್ಲಿ ವರ್ಷಕ್ಕೆ 10 ರಿಂದ 20 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ದಿನಕ್ಕೆ 10 ರಿಂದ 20 ಪ್ರಕರಣಗಳು ದಾಖಲಾಗುತ್ತಿವೆ. ಹಾಗೆಯೇ ಮೈಸೂರಿನಲ್ಲಿಯೂ ಸಹ 21 ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಬ್ಲಾಕ್ ಫಂಗಸ್ ಲಕ್ಷಣಗಳು ಕಾಣಿಸಿದ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಲು ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಹೇಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ್ ಫಂಗಸ್ ಅನ್ನು ನಿರ್ಲಕ್ಷ್ಯ ಮಾಡಬಾರದು. ಬ್ಲಾಕ್ ಫಂಗಸ್ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ನಿರ್ಲಕ್ಷ್ಯ ಮಾಡಿದರೆ ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಿ‌. ತಾಲ್ಲೂಕುಗಳಲ್ಲಿರುವ ವೈದ್ಯರಿಗೆ ಬ್ಲಾಕ್ ಫಂಗಸ್‌ಗೆ ನೀಡುವ ಚಿಕಿತ್ಸಾ ವಿಧಾನದ ಬಗ್ಗೆ ತಿಳಿಸಲು ಕೆ.ಆರ್.ಆಸ್ಪತ್ರೆಯ ವೈದ್ಯರಿಂದ ತರಬೇತಿಯನ್ನು ಕೊಡಿಸಲಾಗುತ್ತದೆ ಎಂದು ತಾಲ್ಲೂಕು ವೈದ್ಯರಿಗೆ ಹೇಳಿದರು.

ಮನೆ ಮನೆ ಸಮೀಕ್ಷೆ ನಡೆಸುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಕಡ್ಡಾಯವಾಗಿ ಆಕ್ಸಿಮೀಟರ್ ಇರಬೇಕು. ಅವರ ಬಳಿ ಇಲ್ಲದಿದ್ದರೆ ತಿಳಿಸಿದರೆ ಅವರಿಗೆ ಸಿಎಸ್ಆರ್ ಫಂಡ್ ಯೋಜನೆಯಡಿ ಆಕ್ಸಿಮೀಟರ್ ಕೊಡಿಸಿಕೊಡಲಾಗುತ್ತದೆ. ಬ್ಲಾಕ್ ಫಂಗಸ್‌ನಿಂದ ಗುಣಮುಖರಾದವರು ಔಷಧಿಗಳನ್ನು ಸರಿಯಾಗಿ ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರತಿ ತಾಲ್ಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು RAT ಕಿಟ್ ಇದ್ದು, ಇದನ್ನು ಕೋವಿಡ್ ಪರೀಕ್ಷೆ ಮಾಡಿಸಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಎ.ಎಂ.ಯೋಗೀಶ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಉಪವಿಭಾಗದಿಕಾರಿ ಡಾ.ಎನ್.ಸಿ.ವೆಂಕಟರಾಜು, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್, ಡಿಹೆಚ್ಒ ಡಾ.ಟಿ.ಅಮರ್ ನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಸಾದ್, ಲಸಿಕಾ ನೋಡೆಲ್ ಅಧಿಕಾರಿ ಡಾ.ಎಲ್.ರವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದ್ಯಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ರುದ್ರೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಧನಂಜಯ್, ಕೆಐಎಡಿಬಿ ಎಸ್‌.ಎಲ್.ಎ.ಒ ಸುರೇಶ್, ತಹಶಿಲ್ದಾರ್ ರಕ್ಷಿತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹದೇವಪ್ರಸಾದ್, ಜಿಲ್ಲಾಧಿಕಾರಿ ಕಚೇರಿಯ ತಹಶಿಲ್ದಾರ್ ನಿಶ್ಚಯ್, ಟಿಎಚ್‌ಒ ಡಾ.ಮಹದೇವಪ್ರಸಾದ್, ಸೇರಿದಂತೆ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *