ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ರಸ್ತೆಯ ತುರ್ತು ದುರಸ್ತಿಗೆ ಸಚಿವ ಸಿ.ಸಿ.ಪಾಟೀಲರ ಸೂಚನೆ
1 min readಮೈಸೂರು,ಅ.21-ನಗರದಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ
ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯುಂಟಾಗಿದೆ. ಈ ಕೂಡಲೇ ಅಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲರು ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭೂಕುಸಿತವಾಗಿರುವ ಸ್ಥಳದಲ್ಲಿ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬೇಕು ಮತ್ತು ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟು ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಈ ಭೂಕುಸಿತ ಸಂಭವಿಸಿದೆ. ಈ ಬಗ್ಗೆ ತಾಂತ್ರಿಕ ವರದಿಯನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಲೀ ಅಥವಾ ಹೆಚ್ಚಿನ ಆಸ್ತಿಪಾಸ್ತಿಯಾಗಲೀ ಹಾನಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಅಲ್ಲಿ ಮುಂದೆ ಹೆಚ್ಚಿನ ಅವಘಡಗಳಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಅಲ್ಲಿಯ ಬೃಹತ್ ನಂದಿ ಪ್ರತಿಮೆಗೆ ತೆರಳುವ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. (ಪ್ರಸ್ತುತ ಚಾಮುಂಡಿ ಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ) ಆದ್ದರಿಂದ ದಯವಿಟ್ಟು ಆ ಭಾಗಕ್ಕೆ ತೆರಳುವ ಪ್ರವಾಸಿಗರು ಇದನ್ನು ಗಮನಿಸಿ ಸೂಕ್ತ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮೈಸೂರಿನ ಜಿಲ್ಲಾ ಆಡಳಿತದ ಸೂಕ್ತ ಸಹಕಾರವನ್ನು ಪಡೆದುಕೊಂಡು ಆದ್ಯತೆಯ ಮೇರೆಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.