ಚಾಮರಾಜನಗರ ದುರ್ಘಟನೆ: ಕೋವಿಡ್ ನಿಂದ ಸತ್ತವರಿಗೂ ಸಹಜ ಸಾವು ಎಂದು ಮರಣ ಪತ್ರ; ಡಿ.ಕೆ. ಶಿವಕುಮಾರ್ ಆಕ್ರೋಶ
1 min readಚಾಮರಾಜನಗರ: ‘ಚಾಮರಾಜನಗರ ದುರ್ಘಟನೆಯಲ್ಲಿ 36 ಮಂದಿ ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ ಎಂದು ರಾಜ್ಯ ಹೈಕೋರ್ಟ್ ನೇಮಿಸಿದ ಸಮಿತಿ ವರದಿ ನೀಡಿದ್ದರೂ, ರಾಜ್ಯ ಸರ್ಕಾರ 24 ಜನರಿಗೆ ಮಾತ್ರ ಪರಿಹಾರ ನೀಡಿದೆ. ಇನ್ನು ಕೋವಿಡ್ ನಿಂದ ಸತ್ತವರಿಗೂ ಈ ಸರ್ಕಾರ ಸಹಜ ಸಾವು ಎಂದು ಪ್ರಮಾಣ ಪತ್ರ ನೀಡಿದ್ದು, ಈ ಸರ್ಕಾರಕ್ಕೆ ನಾಚಿಕೆಯೇ ಇಲ್ಲವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟವರ ಮನೆಗಳಿಗೆ ಭಾನುವಾರ ಭೇಟಿ ನೀಡಿದ ಶಿವಕುಮಾರ್ ಅವರು ಸಂಜೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:
‘ನಾವು ಬಹಳ ನೋವಿನ ಸಮಯದಲ್ಲಿ ಇಲ್ಲಿಗೆ ಬಂದಿದ್ದೇವೆ. ಚಾಮರಾಜನಗರ ದುರ್ಘಟನೆಯನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ವರದಿ ಮಾಡಿ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ರಾಜ್ಯದ ಜನರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಲು ಸಹಾಯ ಹಸ್ತ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕೋವಿಡ್ ಸಮಯದಲ್ಲಿ ಸತ್ತ ಅನೇಕರಿಗೆ ಸರ್ಕಾರ ಮರಣ ಪ್ರಮಾಣ ಪತ್ರ ನೀಡಿಲ್ಲ, ಪರಿಹಾರ ನೀಡಿಲ್ಲ.
ಕೋವಿಡ್ ನಿಂದ ಸತ್ತಿದ್ದಾರೆ ಎಂಬುದಕ್ಕೆ ಪತ್ರ ನೀಡದೆ ಹೋದರೆ ಹೆಣ್ಣುಮಗಳಿಗೆ ಹೇಗೆ ಪರಿಹಾರ ಸಿಗುತ್ತದೆ? ಆಕೆ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ದಿನಾ ಅಲೆದಾಡುತ್ತಿದ್ದಾಳೆ. ಅವರ ಸ್ಥಿತಿ ನೋಡಿದರೆ ದೇವರೇ ಕಾಪಾಡಬೇಕು. ಅವರಿಗೆ ಮರಣ ಪ್ರಮಾಣ ಪತ್ರ, ಪರಿಹಾರ ನೀಡಲು ಈ ಸರ್ಕಾರಕ್ಕೆ ಏನು ಸಮಸ್ಯೆ?
ನಾನು ಕೆಲವು ಮನೆಗಳಿಗೆ ಭೇಟಿ ಕೊಟ್ಟಾಗ ಕೋವಿಡ್ ನಿಂದ ಸತ್ತವರಿಗೆ ಸಹಜ ಸಾವು ಎಂದು ಪ್ರಮಾಣ ಪತ್ರ ನೀಡಿರುವುದು ಗೊತ್ತಾಗಿದೆ. ಅವರಿಗೆ ಕೋವಿಡ್ ಸಾವು ಎಂದು ಪ್ರಮಾಣ ಪತ್ರ ನೀಡಲು ಮುಖ್ಯಮಂತ್ರಿಗಳಿಗೆ ನಾಚಿಕೆಯಾಗುತ್ತದಾ? ನೀವು ಅಧಿಕಾರಿಗಳಿಗೆ ಯಾವ ನಿರ್ದೇಶನ ಕೊಟ್ಟಿದ್ದೀರಿ? ಕೆಲವರು ಆಸ್ಪತ್ರೆಗೆ ಸೇರಲು ಆಗಿಲ್ಲ, ಮನೆಯಲ್ಲೇ ಸತ್ತಿದ್ದಾರೆ. ಈ ಸಮಯದಲ್ಲಿ ಪರಿಶೀಲನೆ ಮಾಡಿ ಸರ್ಕಾರ ಕೋವಿಡ್ ಮರಣ ಪತ್ರ ಕೊಡಬೇಕು.
ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ. ಹೈಕೋರ್ಟ್ ನ ಇಬ್ಬರು ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ ಮಾಡಿ ವರದಿ ಪಡೆದಿದೆ. ಆದರೆ ಸರ್ಕಾರ ಮೈಸೂರಿನಲ್ಲಿ ಕಚೇರಿ ಸ್ಥಾಪಿಸಿ, ತಮ್ಮದೇ ಸಮಿತಿ ರಚಿಸಿ ವರದಿ ಪಡೆದರೆ, ನಮ್ಮ ಜನ, ರೈತರು, ಕಾರ್ಮಿಕರು ಸರ್ಕಾರದ ಮುಂದೆ ಭಿಕ್ಷೆ ಬೇಡಬೇಕಾ? ಚಾಮರಾಜನಗರದ ಸ್ವಾಭಿಮಾನಿ ಜನ ಒಬ್ಬರೂ ಅಲ್ಲಿಗೆ ಹೋಗಿ, ಅವರ ಮುಂದೆ ನಿಲ್ಲಲಿಲ್ಲ. ಅವರ ಸ್ವಾಭಿಮಾನಕ್ಕೆ ಅಭಿನಂದನೆಗಳು.
ನಾನು ಇಲ್ಲಿ ನೋಡಿದ ವಿಡಿಯೋಗಳನ್ನು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಿಗೆ ಟ್ಯಾಗ್ ಮಾಡಿ ಪ್ರಶ್ನೆ ಕೇಳುತ್ತೇನೆ. ಈ ರೀತಿ ಅನ್ಯಾಯಕ್ಕೆ ಒಳಗಾಗಿರುವವರ ಪರವಾಗಿ ಕೆಲಸ ಮಾಡಲು ಕಾರ್ಯಕ್ರಮ ರೂಪಿಸಿದ್ದೇವೆ.
ಜುಲೈ 1ರಿಂದ ತಂಡಗಳಾಗಿ ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ನಾವು ವಿರೋಧ ಪಕ್ಷ ಸ್ಥಾನದಲ್ಲಿದ್ದು, ನಮಗೆ ಅಧಿಕಾರ ಇಲ್ಲ. ನಾವು ಅಧಿವೇಶನಕ್ಕೆ ಆಗ್ರಹಿಸಿದ್ದೇವೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದೇವೆ, ನಮ್ಮ ನಾಯಕರು ಅರ್ಜಿ ಹಾಕುತ್ತಿದ್ದಾರೆ, ನಂತರ ಅದನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸುತ್ತೇವೆ, ಕೋವಿಡ್ ನಿಂದ ಸತ್ತವರ ಕುಟುಂಬಕ್ಕೆ ಮರಣ ಪ್ರಮಾಣ ಪತ್ರ ಕೊಡಿಸಿ, ಪರಿಹಾರ ಸಿಗುವಂತೆ ಮಾಡುತ್ತಿದ್ದೇವೆ. ವಿರೋಧ ಪಕ್ಷ ಇದಕ್ಕಿಂತ ಇನ್ನೇನು ಮಾಡಬೇಕು?
ಸರ್ಕಾರದ ವೆಬ್ಸೈಟ್ ನಲ್ಲಿ 3,27,985 ಜನ ಸತ್ತಿದ್ದಾರೆ ಎಂದು ಪ್ರಕಟಿಸಿತ್ತು. ಮುಖ್ಯಮಂತ್ರಿಗಳು 30 ಸಾವಿರ ಎಂದು ಹೇಳಿದ್ದಾರೆ. ಈಗ ವೆಬ್ಸೈಟ್ ನಿಂದ ಆ ಮಾಹಿತಿ ತೆಗೆದುಹಾಕಿದ್ದಾರೆ. ಹೀಗಾಗಿ ಡೆತ್ ಆಡಿಟ್ ಮಾಡಿಸಿ ಕೋವಿಡ್ ನಿಂದ ಸತ್ತವರಿಗೆ ಪರಿಹಾರ ಕೊಡಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ.
ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಗ್ರಾಮ ಮಟ್ಟದಲ್ಲಿ ಹೋಗಿ ಅಲ್ಲೇ ಯಾರು ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಗುರುತಿಸಿ ಅವರಿಗೆ ಚೆಕ್ ಮೂಲಕ ಪರಿಹಾರ ನೀಡಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ? ಇಲ್ಲಿ ಯಾರೂ ಕೂಡ ಮೋಸ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನವು ಇಲ್ಲವೇ?’