ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಕೇಂದ್ರ ರಾಜ್ಯ ಸರ್ಕಾರಗಳು ಮುಚ್ಚಿಡುತ್ತಿವೆ
1 min readಮೈಸೂರು: ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಕೇಂದ್ರ ರಾಜ್ಯ ಸರ್ಕಾರಗಳು ಮುಚ್ಚಿಡುತ್ತಿವೆ ಅಂತ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಆರೋಪ ಮಾಡಿದ್ದಾರೆ.
ದೇಶಾದ್ಯಂತ ಕೊರೊನಾ ಸೋಂಕಿನಿಂದ 42 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲೇ ಏಳು ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಆದರೂ ಕೇಂದ್ರ ರಾಜ್ಯ ಸರ್ಕಾರಗಳು ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿವೆ. ಕೂಡಲೇ ನಿಖರ ಮಾಹಿತಿ ವಾಸ್ತವಾಂಶವನ್ನು ಕೇಂದ್ರ ರಾಜ್ಯ ಸರ್ಕಾರಗಳು ತಿಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದಾರೆ.
ಇನ್ನು ಕೊರೊನಾ ಲಸಿಕೆ ಪಡೆದವರಿಗೆ ನೀಡುತ್ತಿರುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಹಾಕುತ್ತಿರುವುದಕ್ಕೆ ಲಕ್ಷ್ಮಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರ ತೆರಿಗೆ ದುಡ್ಡಿನಿಂದ ಸಂಗ್ರಹವಾದ ಹಣದಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಹಾಗಾಗಿ ಲಸಿಕೆ ಪಡೆಯುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಲಸಿಕೆ ಪಡೆದವರ ಪ್ರಮಾಣ ಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಕುವುದಾದರೆ, ಕೊರೊನಾದಿಂದ ಸಾವನ್ನಪ್ಪುವವರ ಮರಣ ಪ್ರಮಾಣ ಪತ್ರದಲ್ಲೂ ಪ್ರಧಾನಿ ಮೋದಿಯವರ ಭಾವಚಿತ್ರ ಹಾಕಲಿ ಅಂತ ಲಕ್ಷ್ಮಣ್ ಹೇಳಿದರು.
ಮೈಸೂರು ಜಿಲ್ಲೆಯ ವಿಚಾರದಲ್ಲೂ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೈಸೂರು ಜಿಲ್ಲೆಯ ಜನರನ್ನು ಮನೆಯಲ್ಲೇ ಕೂಡಿ ಹಾಕಲಾಗಿದೆ. ಕೂಡಲೇ ಮೈಸೂರು ಜಿಲ್ಲೆಯನ್ನು ಅನ್ ಲಾಕ್ ಮಾಡಬೇಕು. ಕೊರೊನಾ ವಿಚಾರದಲ್ಲಿ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಕೂಡ ಸುಳ್ಳು ಹೇಳುತ್ತಿದ್ದಾರೆ. ಕೊರೊನಾ ಡೆಲ್ಟಾ ಪ್ಲಸ್ ವಿಚಾರದಲ್ಲಿ ಮೈಸೂರು ಜಿಲ್ಲಾಧಿಕಾರಿ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.
ಆರೋಗ್ಯ ಸಚಿವ ಡಾ ಸುಧಾಕರ್ ಕೊರೊನಾ ಡೆಲ್ಟಾ ಪ್ಲಸ್ ಪ್ರಕರಣವೊಂದು ಮೈಸೂರಿನಲ್ಲಿ ವರದಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಯಾವುದೇ ಡೆಲ್ಟಾ ಪ್ಲಸ್ ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ಸುಳ್ಳು ಹೇಳುತ್ತಾ ಹೋದರೆ ಮುಂದೆ ಬಗಾದಿ ಗೌತಮ್ ಕೂಡ ಸಿಕ್ಕಿ ಬೀಳಲಿದ್ದಾರೆ ಅಂತ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.