ನಿಘಂಟು ತಜ್ಞ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ವಿಧಿವಶ
1 min readಮೈಸೂರು: ನಾಡಿನ ಖ್ಯಾತ ಸಂಶೋದಕ, ನಿಘಂಟು ತಜ್ಞ ಫ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸೋಮವಾರ ರಾತ್ರಿ 1.15 ರ ವೇಳೆಗೆ ತಮ್ಮ ವಯೋ ಸಹಜ ಕಾರಣಗಳಿಂದ 108 ನೇ ವಯಸ್ಸಿನಲ್ಲಿ ನಿಧನರಾದರು.
ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಖ್ಯಾತ ವಿದ್ವಾಂಸರು ಹಾಗೂ ಜನಪ್ರಿಯ ಪ್ರಾಧ್ಯಾಪಕರು. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುವರ್ಣ ಪದಕದೊಡನೆ ಎಂ.ಎ. ಪದವಿ, ನಂತರ ಬಿ.ಟಿ. ಪದವಿ ಗಳಿಕೆ. ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿ, ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ಸೇವೆ ಸಲ್ಲಿಸಿ ನಿವೃತ್ತಿ.
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು.
ನಡೆದಾಡುವ ನಿಘಂಟು, ಶಬ್ಧ ಬ್ರಹ್ಮ ಎಂದು ಜನಜನಿತರಾಗಿರುವ ಶ್ರೀಯುತರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಕೆ. ೫೦ ಪುಸ್ತಕಗಳನ್ನು, ೧೪ ನಿಘಂಟುಗಳನ್ನು ಪ್ರಕಟಗೊಳಿಸಿರುವುದಲ್ಲದೆ ‘ಇಗೋ ಕನ್ನಡ’ ಎಂಬ ಅಂಕಣದಿಂದ ನಾಡಿನಲ್ಲಿ ಮನೆಮಾತಾಗಿದ್ದಾರೆ.
ನಿಘಂಟು ಪರಿವಾರ, ಅಕ್ರೂರ ಚರಿತ್ರೆ (ಸಂಪಾದನೆ), ಇಗೋ ಕನ್ನಡ (ಸಾಮಾಜಿಕ ನಿಘಂಟು), ಗತಿ ಪ್ರಜ್ಞೆ, ಕನ್ನಡವನ್ನು ಉಳಿಸಿ ಬೆಳೆಸಿದವರು, ಅನುಕಲ್ಪನೆ, ಕರ್ಣ ಕರ್ಣಾಮೃತ ಮುಂತಾದವು ಪ್ರಮುಖ ಕೃತಿಗಳು.
ಹಲವಾರು ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರ ಪಾಂಡಿತ್ಯಕ್ಕೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲಿ ವಿದ್ಯಾಲಂಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ಅಂತರಾಷ್ಟ್ರೀಯ ನಿಘಂಟು ಸಮ್ಮೇಳನಗಳಿಗೆ ಆಹ್ವಾನ ಮುಂತಾದವು ಮುಖ್ಯವಾದವು.
ಜಿ.ವಿ. ಎಂದೇ ಖ್ಯಾತರಾದ ಪ್ರೊ|| ಜಿ. ವೆಂಕಟಸುಬ್ಬಯ್ಯ ಅವರು ಅತ್ಯುತ್ತಮ ಭಾಷಣಕಾರರು ಹಾಗೂ ಸರಳ ಸಜ್ಜನಿಕೆಯ ವಿದ್ವಾಂಸರು ಇಂದು ಅಗಲಿದ್ದಾರೆ.