ಆಶಾಕಾರ್ಯಕರ್ತೆಯರಿಗೆ ಮಾಸ್ಕ್,ಗ್ಲೌಸ್ ನೀಡದಿದ್ದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತರಾಟೆ
1 min readಹಾವೇರಿ: ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್ ನೀಡದ ಅಧಿಕಾರಿಗಳನ್ನು ಹಿರೇಕೆರೂರು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಬಿ.ಸಿ ಪಾಟೀಲರು ಹಿರೇಕೆರೂರು ಪಟ್ಟಣದ ತಹಶಿಲ್ದಾರರ ಕಚೇರಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಖಾಸಗಿ ವೈದ್ಯರ ಜೊತೆ ಕೋವಿಡ್ 19 ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕೆಲ ಆಶಾ ಕಾರ್ಯಕರ್ತರು ಸಚಿವರ ಬಳಿ ಬಂದು ತಮಗೆ ಆರೋಗ್ಯ ಇಲಾಖೆಯಿಂದ ಯಾವುದೇ ಮುನ್ನೆಚ್ಚರಿಕಾ ಆರೋಗ್ಯ ಸಾಧನಗಳನ್ನು ವಿತರಿಸಿಲ್ಲ ಎಂದು ಅಳಲನ್ನು ಹಂಚಿಕೊಂಡರು.
ಈ ವೇಳೆ ಆಶಾಕಾರ್ಯಕರ್ತೆಯರ ಸಮಸ್ಯೆ ಆಲಿಸಿದ ಬಿ.ಸಿ.ಪಾಟೀಲರು,ತಾಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು,ಕೊರೊನಾ ಸೋಂಕನ್ನೂ ಲೆಕ್ಕಿಸದೇ ಆಶಾಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ಆರೋಗ್ಯದ ಅರಿವು ಹಾಗೂ ಸೋಂಕಿತರ ಮಾಹಿತಿ ಪಡೆಯುತ್ತಿದ್ದಾರೆ.
ಕೊರೋನಾ ಸೇವೆಯಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿದ್ದಾರೆ.ಇಂತವರಿಗೆ ಜಿಲ್ಲಾ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ ಪೂರೈಸದಿದ್ದರೆ ಹೇಗೆ? ಇದೆಲ್ಲವನ್ನು ಬಳಸಬೇಕು ಎಂದು ನಾವೇ ಹೇಳುತ್ತೇವೆ.ಅದನ್ನೇ ಪೂರೈಸದಿದ್ದರೆ ಹೇಗೆ?ನಿಜಕ್ಕೂ ಇದು ಗಂಭೀರ ವಿಚಾರ.ತಾಲೂಕು ಜಿಲ್ಲಾಡಳಿತ ಇಲಾಖೆ ಎಂದು ಅವರಿವರ ಮೇಲೆ ನೆಪ ಸಬೂಬು ಹೇಳದೇ ಈ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಇದೆಲ್ಲವನ್ನೂ ಪೂರೈಸಬೇಕು.ಇಂತಹ ಅಸಡ್ಡೆತನವನ್ನು ತಾವೆಂದೂ ಸಹಿಸುವುದೂ ಇಲ್ಲ.ಇಂತಹ ಬೇಜವಾಬ್ದಾರಿ ನಡವಳಿಕೆ ಸರಿಯೂ ಅಲ್ಲ ಎಂದು ತಾಕೀತು ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೋನಾ ಮಹಾಮಾರಿ ತೊಲಗಿಸಲು ಜನರ ರಕ್ಷಣೆಗೆ ಸರ್ಕಾರಿ ಖಾಸಗಿ ವೈದ್ಯರು ಎಂದು ಬೇಧಭಾವ ಮಾಡದೇ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು. ಕೋವಿಡ್19 ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಣೆ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಯಾವುದೇ ರೀತಿಯ ಔಷಧಿ ಮಾತ್ರೆಗಳನ್ನು ಔಷಧಿ ಅಂಗಡಿಯವರು ನೀಡಬಾರದು. ಈ ಕುರಿತು ಬಿಗಿಯಾದ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ಸಿಪಿಐ ಅವರಿಗೆ ಸೂಚಿಸಿದರು. ಅಲ್ಲದೇ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳಲ್ಲಿ ಮದುವೆಗಳಿಗೆ ಪರವಾನಗಿ ನೀಡಬಾರದು ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್ ಹಾಗೂ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು