ಚಾಮರಾಜನಗರ, ಮಂಡ್ಯ ಉಸ್ತುವಾರಿ ಸಚಿವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ
1 min readಮೈಸೂರು: ಆಕ್ಸಿಜನ್ ಸಿಲಿಂಡರ್ ಭರ್ತಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಚಾಮರಾಜನಗರ ಮತ್ತು ಮಂಡ್ಯ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಮತ್ತು ಮಂಡ್ಯ ಉಸ್ತುವಾರಿ ಸಚಿವರೇ ಬಂದು ಮೈಸೂರಿನಲ್ಲಿ ಸಿಲಿಂಡರ್ ತುಂಬಿಸಿಕೊಂಡು ಹೋಗ್ತಿದ್ದಾರೆ. ಇದು ಮೈಸೂರಿನ ಮೇಲೆ ದಬ್ಬಾಳಿಕೆ ಮಾಡುವ ಪರಿಸ್ಥಿತಿ ನಡೆಯುತ್ತಿದೆ. ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ಮಾತಾಡಿಕೊಳ್ಳಿ. ಬೆದರಿಸಿ ಮೈಸೂರಿಗೆ ಬಂದು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಡಿ. ನಾವು ಈಗಾಗಲೇ ಅಕ್ಕಪಕ್ಕದ ಜಿಲ್ಲೆಗೆ ಪ್ರೀತಿಯಿಂದ ಕೊಡುತ್ತಿದ್ದೇವೆ. ಅದನ್ನ ಬಿಟ್ಟು ಪೊಲೀಸ್ ಜೀಪ್ ತಂದು ವಾಹನ ತಂದು ತುಂಬಿಕೊಂಡು ಹೋಗೋದಲ್ಲ. ಚಾಮರಾಜನಗರದ ಘಟನೆ ಹೇಳಿ ಅನಗತ್ಯ ಗೊಂದಲ, ದಬ್ಬಾಳಿಕೆ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಯವರನ್ನ ಕರೆದುಕೊಂಡು ಬಂದು ಸಚಿವರು ಸಿಲಿಂಡರ್ ತುಂಬಿಸಿಕೊಳ್ಳುವ ಕೆಲಸ ಆಗ್ತಿದೆ. ಮೊದಲು ಈ ಕೆಲಸ ಮಾಡೋದನ್ನ ಬಿಡಿ. ನಾವು ಈಗಾಗಲೇ ಕೊರತೆ ವಾತಾವರಣ ಎದುರಿಸುತ್ತಿದ್ದೇವೆ. ನಾವೇ ಜಿಲ್ಲೆಯಲ್ಲಿ ಅಜೆಸ್ಟ್ಮೆಂಟ್ ಮಾಡುಕೊಂಡು ಇದ್ದೇವೆ. ಎರಡು ಜಿಲ್ಲೆಯ ಉಸ್ತುವಾರಿ ಸಚಿವರು ಆಕ್ಸಿಜನ್ಗಾಗಿ ಮೈಸೂರಿಗೆ ಬಂದು ಹೋಗುವುದು ಸರಿಯಲ್ಲ. ನೀವೂ ಮೈಸೂರು ಜಿಲ್ಲೆಯನ್ನ ಕಟಕಟೆಯಲ್ಲಿ ನಿಲ್ಲಿಸುವಂತ ಕೆಲಸ ಮಾಡಬೇಡಿ. ತಪ್ಪು ಅಭಿಪ್ರಾಯ ಬರುವಂತ ಕೆಲಸ ಮೈಸೂರಿಗೆ ಮಾಡಬೇಡಿ. ಸಹಾಯ ಅಂತ ಅಂದ್ರೆ ಮೈಸೂರು ಮೊದಲ ಸ್ಥಾನದಲ್ಲಿ ನಿಲ್ಲುತ್ತೆ. ನೀವೂ ಇದನ್ನ ದುರುಪಯೋಗ ಮಾಡಿಕೊಳ್ಳಬೇಡಿ ಅಂತ ಮೈಸೂರಿನಲ್ಲಿ ಸಚಿವರ ಅನಗತ್ಯ ಭೇಟಿಗೆ ಸಂಸದ ಪ್ರತಾಪ್ ಸಿಂಹ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಸಿಸಿ ಕ್ಯಾಮೆರಾ ಕಣ್ಗಾವಲು:
ಮೈಸೂರಿನಲ್ಲಿ ಆಕ್ಸಿಜನ್ ಸರಬರಾಜು ಮೇಲೆ ಕಣ್ಣಿಡಲು ಸಂಸದ ಪ್ರತಾಪ್ ಸಿಂಹ ನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಆಕ್ಸಿಜನ್ ಸರಬರಾಜು ಏಜೆನ್ಸಿ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲಿಡಲು ಒಟ್ಟು 8 ಕ್ಯಾಮೆರಾ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. 4 ಏಜೆನ್ಸಿಗಳಲ್ಲಿ ತಲಾ ಎರಡು ಕ್ಯಾಮೆರಾ. 24*7 ಮೊಬೈಲ್ ಮೂಲಕ ಮಾನಿಟರ್. ನಾನು(ಪ್ರತಾಪ್ ಸಿಂಹ), ಡಿಸಿ, ನೋಡಲ್ ಅಧಿಕಾರಿಯಿಂದ ಇದರ ವೀಕ್ಷಣೆ ಮಾಡುತ್ತಿರುತ್ತೇವೆ. ಮೈಸೂರಿನ ಆಸ್ಪತ್ರೆಗಳಿಗೆ ಕೋಟಾ ನಿಗದಿ ಮಾಡಿ ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಬೇರೆ ಆಸ್ಪತ್ರೆಯವರು ನೇರವಾಗಿ ಖರೀದಿ ಮಾಡುವುದಕ್ಕೆ ಬ್ರೇಕ್ ಹಾಕಲಾಗುವುದು ಅಂತ ಸಂಸದ ಪ್ರತಾಪ್ಸಿಂಹ ತಿಳಿಸಿದ್ದಾರೆ.