ಹಂಪಿಯ ಪ್ರಸಿದ್ಧ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಇನ್ನಿಲ್ಲ

1 min read

ವಿಜಯನಗರ: ಹಂಪಿಯ ಪ್ರವಾಸಿಗರಿಗೆ ಬಡವಿಲಿಂಗದ ಅರ್ಚಕರಾಗಿದ್ದ ಶ್ರೀ ಕೃಷ್ಣ ಭಟ್ಟರ ಪರಿಚಯ ಇರದಿರಲು ಸಾಧ್ಯವೇ ಇಲ್ಲ… 1995ರಲ್ಲಿ ದೈನಂದಿನ ನೈವೇದ್ಯಕ್ಕೆಂದು 2–3 ತಿಂಗಳಿಗೆ 30 ಕೆಜಿ ಅಕ್ಕಿ ಮತ್ತು ತಿಂಗಳಿಗೆ 300ರೂ ಸಂಭಾವನೆಯೊಂದಿಗೆ ನಿಯುಕ್ತರಾದವರೇ, ಶ್ರೀ ಕೃಷ್ಣ ಭಟ್ಟರು ಎಂಬ ಮಾಹಿತಿಯಿದೆ… ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಾಸರವಳ್ಳಿ ಎಂಬ ಗ್ರಾಮದವರಾದ ಇವರು 1978ರಲ್ಲಿ ಮಲೆನಾಡಿನಿಂದ ಬಿಸಿಲು ನಾಡಿಗೆ ಬಂದು ಕೆಲಕಾಲ ವಿರೂಪಾಕ್ಷ ದೇವರ ಅರ್ಚಕರೂ ಆಗಿದ್ದರು…

ಸುಮಾರು 9 ಅಡಿ ಎತ್ತರದ ಚಾವಣಿ ಇರದ ಏಕಶಿಲೆಯ ಈ ಬಡವಿ ಲಿಂಗದ ದೇವಾಲಯದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ… ವಯೋವೃದ್ಧ ಅರ್ಚಕರಾದ ಶ್ರೀಕೃಷ್ಣ ಭಟ್ಟರ ದಿನಚರಿ ಬೆಳಿಗ್ಗೆ 6 ಗಂಟೆಗೆಲ್ಲಾ ಆರಂಭವಾಗುತ್ತಿತ್ತು… ಬೆಳಗ್ಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಸಂಧ್ಯಾವಂದನೆಗಳ ನಂತರ ಮನೆಯಲ್ಲಿ ನಿತ್ಯಪೂಜಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಪೂರೈಸಿದ ನಂತರ, ಗಂಟೆ ಒಂದಾಗುತ್ತಿದ್ದಂತೆಯೇ, ಕೈಯ್ಯಲ್ಲೊಂದು ಬಕೇಟು ಹಿಡಿದುಕೊಂಡು ಅದರಲ್ಲಿ ವಿಭೂತಿ, ಅರಿಶಿನ-ಕುಂಕುಮ, ನೈವೇದ್ಯಕ್ಕೆಂದು ಒಂದಿಷ್ಟು ಅಕ್ಕಿ ಇಟ್ಟುಕೊಂಡು, ಬಾಗಿದ ಬೆನ್ನುಗಳಿಗೆ ಆಸರೆಯಾಗಿ ಊರುಗೋಲನ್ನು ಊರಿಕೊಂಡು ಬಡವಿ ದೇವಸ್ಥಾನವನ್ನು ತಲುಪುತ್ತಿದ್ದರು…

ಹೀಗೆ ಕಷ್ಟ ಪಟ್ಟು ದೇವಸ್ಥಾನಕ್ಕೆ ಬರುವ ಭಟ್ಟರಿಗೆ ಬಡವಿ ಲಿಂಗವನ್ನು ನೋಡಿದ ತಕ್ಷಣವೇ ಅದೆಲ್ಲಿಂದ ಬರುತ್ತಿತ್ತೋ ಅದಮ್ಯ ಚೇತನಾ ಶಕ್ತಿ… ನಡುಗುವ ದೇಹಕ್ಕೆ ಒಂದು ತುಂಡು ಪಂಚೆಯನ್ನು ಸುತ್ತಿಕೊಂಡು ಅವರ ಮಂಡಿವರೆಗೂ ಇರುವ ನೀರಿಗೆ ಇಳಿದು, 3 ಅಡಿ ನೀರಿನಲ್ಲಿ ಮಳುಗಿರುವ ಲಿಂಗದ ಪೀಠಕ್ಕೆ ಕಾಲೂರಿ, 9 ಅಡಿಯ ಲಿಂಗದ ಮೇಲ್ಭಾಗವನ್ನು ಶುಚಿಗೊಳಿಸುವ ಅವರ ಸಾಹಸವನ್ನು ನೋಡುವುದೇ ಒಂದು ರೋಮಾಂಚನ… ಇನ್ನೇನು ಬಿದ್ದು ಬಿಡುವರೇನೋ ಎಂಬಂತೆ ತೂರಾಡುತ್ತಿದ್ದರೂ ಅಷ್ಟು ಎತ್ತರದ ಲಿಂಗದ ಮೇಲೆ ಹತ್ತಿ ಹಿಂದಿನ ದಿನದ ಹೂಗಳನ್ನು ಮತ್ತು ಭಕ್ತರು ಎಸೆದ ನಾಣ್ಯಗಳನ್ನು ಹೆಕ್ಕಿ ತೆಗೆದು, ನಂತರ ಬಕೀಟಿನಿಂದ ನೀರನ್ನು ಲಿಂಗ ಸಂಪೂರ್ಣ ನೆನೆಯುವಷ್ಟು ಎರಚಿ, ಆ ಬೃಹತ್ ಲಿಂಗವನ್ನು ಶುದ್ಧೀಕರಿಸಿ, ಹೂವು, ವಿಭೂತಿ ಅರಿಶಿನ ಕುಂಕುಮವಿಟ್ಟು, ನೈವೇದ್ಯ ಅರ್ಪಿಸಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಲೇ, ಪೂಜೆ ಸಲ್ಲಿಸುವ ಪರಿ ನಿಜಕ್ಕೂ ಅದ್ಭುತ…

https://twitter.com/ShobhaBJP/status/1386281154236407813?s=20

ಸುಮಾರು ಅರ್ಧ ಗಂಟೆಗಳ ಕಾಲ ನಡೆಯುವ ಈ ಪೂಜಾ ಕೈಂಕರ್ಯವನ್ನು ಒಂದು ದಿನವೂ ತಪ್ಪಿಸದೇ ನಡೆಸಿಕೊಂಡು ಬಂದಿದ್ದ ಶ್ರೀಯುತರು ಯಾರೊಂದಿಗೂ ಕಾಣಿಕೆಯನ್ನಾಗಲೀ, ದಕ್ಷಿಣೆಯನ್ನಾಗಲೀ ಬಯಸುತ್ತಿರಲಿಲ್ಲ… ಹಾಗೊಮ್ಮೆ ಪ್ರವಾಸಿಗಳು ಮತ್ತು ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಒಂದಷ್ಟು ಕಾಣಿಕೆ ಸಲ್ಲಿಸಿದರೆ, ಅದರ ಬಹುಪಾಲು ಮೊತ್ತವನ್ನು ಗೋಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರಂತೆ…

ಬಾಗಿದ ದೇಹ, ನಡುಗುತ್ತಿದ್ದ ಕೈ ಕಾಲು, ಮಂದವಾಗಿದ್ದ ಕಿವಿ, ಮಂಜಾಗಿದ್ದ ಕಣ್ಣು ಇಷ್ಟೆಲ್ಲಾ ಇದ್ದರೂ ಪ್ರತಿನಿತ್ಯವೂ ಮಳೆ-ಗಾಳಿ-ಬಿಸಿಲು ಯಾವುದನ್ನೂ ಲೆಕ್ಕಿಸದೇ, ಶಿವನ ಆರಾಧನೆಯೇ ಸರ್ವಸ್ವ ಮುಪ್ಪು ದೇಹಕ್ಕೆ ಬಂದಿರಬಹುದು, ಸಂಕಲ್ಪ, ಭಕ್ತಿಗೆ ಮುಪ್ಪಾಗಿಲ್ಲ ಎಂದು ಬಡವಿ ಲಿಂಗಕ್ಕೆ ತಪ್ಪಿಸದೇ ಪೂಜೆ ಸಲ್ಲಿಸುತ್ತಿದ್ದ 94 ವರ್ಷದ ಶ್ರೀ ಕೃಷ್ಣ ಭಟ್ಟರು ಇಂದು ನಮ್ಮನ್ನು ಅಗಲಿದ್ದಾರೆ… ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ… ಮುಂದಿನ ಬಾರಿ ಹಂಪೆಗೆ ಹೋದಾಗ ಬಡವಿ ಲಿಂಗವನ್ನು ನೋಡುತ್ತಾ ಭಟ್ಟರನ್ನು ಸ್ಮರಿಸೋಣ…

About Author

Leave a Reply

Your email address will not be published. Required fields are marked *