ಕುಶ ಆನೆ ಈಗ ಬಂಧ ಮುಕ್ತ: ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ
1 min readಮೈಸೂರು: “ಕುಶ” ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ದಿನಾಂಕ 03/06/2021 ರ ಸಂಜೆ ಅರಣ್ಯ ಪ್ರದೇಶ ದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಕುಶ ಬಂಧ ಮುಕ್ತನಾಗಿದ್ದಾನೆ.
ದುಬಾರೆ ಆನೆ ಶಿಬಿರದಿಂದ ಕಾಡಿಗೆ ಓಡಿ ಹೋಗಿದ್ದ ‘ಕುಶ’ ಆನೆಯನ್ನು ಪುನಃ ಹಿಡಿದು ತರಲಾಗಿತ್ತು. ಈಗ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆದೇಶದಂತೆ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳಿಸಲಾಗಿದೆ.
ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ “ಕುಶ” ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ಏಪ್ರಿಲ್ 28 ರಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಸ್ಥಳ ನಿಗದಿಪಡಿಸಿ, ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು, ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ ಅಂತ ಸಚಿವ ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.
ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಕೆ. ಪಿ ರಂಜನ್ ಹಾಗೂ ಅರಣ್ಯ ಪಶುವೈದ್ಯಾಧಿಕಾರಿ ಡಾ. ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು, ಬೀಳ್ಕೊಟ್ಟಿದ್ದಾರೆ.