ನಯಾಪೈಸೆ ಹಣ ಕೇಳದೆ ಸೋಂಕಿತರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ ವೈದ್ಯರು..!
1 min readಮೈಸೂರು: ಒಂದೆಡೆ ಲಕ್ಷ ರೂ. ಸಂಬಳ ಕೊಟ್ಟರೂ ಕೆಲಸಕ್ಕೆ ಬಾರದ ವೈದ್ಯರು. ಮತ್ತೊಂದೆಡೆ ನಯಾಪೈಸೆ ಹಣ ಕೇಳದೆ ಉಚಿತ ಸೇವೆ ಸಲ್ಲಿಸುತ್ತಿರುವ ವೈದ್ಯರು.
ಹೌದು. ಬರೋಬ್ಬರಿ 30ಕ್ಕೂ ಹೆಚ್ಚು ಸ್ವಯಂಸೇವಕರು ನಯಾಪೈಸೆ ಹಣ ಕೇಳದೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರು, ಪ್ಯಾರಾಮೆಡಿಕಲ್, ನರ್ಸಿಂಗ್, ನಾನ್ಮೆಡಿಕಲ್ ಹೀಗೆ ಪುಕ್ಕಟೆ ಸೇವೆಗೆ ನಿಂತಿದ್ದಾರೆ ಈ ಗಟ್ಟಿಗರು.
ಇವರುಗಳು ನಗರದ ತುಳಸಿದಾಸಪ್ಪ ಆಸ್ಪತ್ರೆ, ಬೀಡಿ ಕಾರ್ಮಿಕರ ಆಸ್ಪತ್ರೆ, ಟೆಲಿ ಮೆಡಿಕಲ್ ಸೆಂಟರ್ನಲ್ಲಿ ಕೊರೋನಾ ಸೋಂಕಿತರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. 6 ಮಂದಿ ವೈದ್ಯರು ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಆಸ್ಪತ್ರೆಗೆ ಬಂದು ಕೆಲಸ ಮಾಡುತ್ತಿದ್ದೇವೆ. ಯಾವುದೇ ಹಣ, ಅಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ನಾನ್ಮೆಡಿಕಲ್ ಸ್ವಯಂಸೇವಕರ ಹೇಳಿದ್ದಾರೆ.
ಇನ್ನು ವೈದ್ಯರಿಗೆ ಸರ್ಕಾರ 64 ಸಾವಿರ ರೂ. ಸಂಬಳ ನಿಗದಿ ಮಾಡಿದೆ. ಜಿಲ್ಲಾಡಳಿತ, ಮುಡಾ ಅನುದಾನ ಸೇರಿ 1 ಲಕ್ಷ ರೂ. ಸಂಬಳ ಆಫರ್ ನೀಡಿದೆ. ಆದರೆ ಲಕ್ಷ ರೂ. ಸಂಬಳ ಕೊಟ್ಟರೂ ವೈದ್ಯರು ಸಿಗುತ್ತಿಲ್ಲ ಅಂತ ಶಾಸಕರಾದ ಡಾ.ಯತೀಂದ್ರ, ಸಾ.ರಾ.ಮಹೇಶ್, ತನ್ವೀರ್ ಸೇಠ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಚಿತ ಸೇವೆಗೆ ಮುಂದೆ ಬರುತ್ತಿರುವ ಸ್ವಯಂಸೇವಕರಿಗೆ ಒಂದು ಸಲಾಂ.