JSS ಆಸ್ಪತ್ರೆಯಲ್ಲಿ ಆಕ್ಸಿಜನೇಟೆಡ್ ಹಾಸಿಗೆ ಹೆಚ್ಚಿಸಲು ಸುತ್ತೂರು ಶ್ರೀಗಳ ಸ್ಪಂದನೆ
1 min readಮೈಸೂರು: ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಹಂಚಿಕೆ ಮಾಡಲು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆ ಹೆಚ್ಚಳ ಮಾಡಲು ಸುತ್ತೂರು ಶ್ರೀಗಳೊಂದಿಗೆ ಸಭೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ಜೆ.ಎಸ್.ಎಸ್.ನಲ್ಲಿ 417 ಹಾಸಿಗೆಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 100 ಆಮ್ಲಜನಕ ಸಹಿತ ಹಾಸಿಗೆಗಳು ಇವೆ. ಈ ಆಕ್ಸಿಜನೇಟೆಡ್ ಹಾಸಿಗೆಗಳ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುವಂತೆ ಕಳೆದ ವಾರ ಶ್ರೀಗಳನ್ನು ಭೇಟಿ ಕೇಳಿದ್ದೆವು. ಶ್ರೀಗಳು ಅದಕ್ಕೆ ಸ್ಪಂದಿಸಿದ್ದಾರೆ ಎಂದರು.
ಆಕ್ಸಿಜನೇಟೆಡ್ ಹಾಸಿಗೆ ಹೆಚ್ಚಿಸಿದರೆ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸುವಂತೆ ಕೇಳಿದ್ದಾರೆ. ಇದರ ಉಸ್ತುವಾರಿ ನೋಡಿಕೊಳ್ಳುವ ಪ್ರತಾಪ್ ಸಿಂಹ ಅವರು ಅದರಂತೆ ಕ್ರಮವಹಿಸುವರು ಎಂದರು.
ಆಕ್ಸಿಜನ್ ಕೊರತೆ ನೀಗಿಸಲು ಜೆಎಸ್ಎಸ್ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಹೆಚ್ಚಿಸಲು ಗುಜರಾತ್ನ ಕಂಪನಿಯೊಂದಿಗೆ ಜೆಎಸ್ಎಸ್ ಒಡಂಬಡಿಕೆ ಮಾಡಿಕೊಂಡಿದೆ. ಘಟಕ ಗುಜರಾತ್ ನಿಂದ ಬರಲು ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಅಧ್ಯಕ್ಷರುಗಳಾದ ರಘು, ಅಪ್ಪಣ್ಣ, ಶ್ರೀವತ್ಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.