ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಏಕಾಂಗಿ ಜಾಗಟೆ ಚಳುವಳಿ
1 min readಮೈಸೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ನಿವೃತ್ತ ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್ ಒಬ್ಬರು ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಗರದ ಟೌನ್ಹಾಲ್ ಬಳಿ ಏಕಾಂಗಿ ಜಾಗಟೆ ಚಳವಳಿ ನಡೆಸಿದರು.
ಬಿಜೆಪಿ ನಾಯಕರು ಕೋವಿಡ್ ಕಾಲಘಟ್ಟದಲ್ಲೂ ಪಂಚ ರಾಜ್ಯ ಚುನಾವಣೆ ವೇಳೆ ರ್ಯಾಲಿ ನಡೆಸಿ ಕೋವಿಡ್ ಸೋಂಕು ಹೆಚ್ಚಲು ಕಾರಣಕರ್ತರಾಗಿದ್ದಾರೆ. ಅಲ್ಲದೇ ಕುಂಭಮೇಳದ ಮೂಲಕ ಕೋವಿಡ್ ಸೊಂಕು ವ್ಯಾಪಕವಾಗಿ ಹರಡಲು ಕಾರಣರಾಗಿದ್ದಾರೆ ಎಂದು ಕೆಪಿಟಿಸಿಎಲ್ ನಿ. ಎಂಜಿನಿಯರ್ ಮುದ್ದುವೆಂಕಟಪ್ಪ ಅವರು ಆರೋಪಿಸಿದರು.
ಲಾಕ್ಡೌನ್ ಘೋಷಣೆ ಮಾಡುವ ಮೊದಲು ಸರ್ಕಾರವು ಜನರಿಗೆ ಅಗತ್ಯ ದಾಸ್ತಾನು, ಪರಿಹಾರವನ್ನು ನೀಡಬೇಕಿತ್ತು. ಆದರೆ, ಜವಾಬ್ದಾರಿಯಿಂದ ನುಣುಚಿಕೊಂಡಿರುವ ಸರ್ಕಾರವು ತಕ್ಷಣವೇ ಲಾಕ್ಡೌನ್ ಘೋಷಿಸಿ ಬಡವರ ಹೊಟ್ಟೆಮೇಲೆ ಹೊಡೆದಿದ್ದಾರೆ.
ಹಣ್ಣು ತರಕಾರಿ ಮಾರುವ ಬಡ ವ್ಯಾಪಾರಿಗಳಿಂದ ದಂಡ ಸಂಗ್ರಹಿಸಲಾಗುತ್ತಿದೆ. ಈ ರೀತಿ ಸಂಗ್ರಹಿಸಿದ ಹಣ ಕೋಟಿಗಟ್ಟಲೆ ಎಂದು ರಾಜ್ಯ ಸರ್ಕಾರ ನಾಚಿಕೆ ಬಿಟ್ಟು ಹೇಳಿಕೊಳ್ಳುತ್ತಿದೆ. ಪಕ್ಕದ ರಾಜ್ಯಗಳು ನೀಡಿರುವ ಲಾಕ್ಡೌನ್ ಪ್ಯಾಕೇಜ್ಗಳನ್ನು ನೋಡಿ ಸರ್ಕಾರವು ರಾಜ್ಯದ ಜನತೆಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಜನ ಇಂದು ಬೀದಿಗೆ ಬಂದರೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಅವರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಸಿದರೆ ಈ ರೀತಿ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.