ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ: ಶಾಸಕ ರಾಮದಾಸ್
1 min readಮೈಸೂರು: ಇಂದು ಜಗತ್ತಿನ ಅನೇಕ ದೇಶಗಳಲ್ಲಿ ೭ನೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗಿದೆ. ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ. ಅದರಲ್ಲೂ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ. ರಾಮದಾಸ್ ನುಡಿದರು.
೭ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಫೆಡರೇಶನ್ ಆಫ್ ಮೈಸೂರು ಹಾಗೂ ಇದರ ಅಂಗ ಸಂಸ್ಥೆಗಳಾದ ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಶನ್, ಮೈಸೂರು ಯೋಗ ಒಕ್ಕೂಟ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಜಿಎಸ್ಎಸ್ ಯೋಗ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಮೈಸೂರಿನ ಕುವೆಂಪುನಗರದಲ್ಲಿರುವ ಜಿಎಸ್ಎಸ್ ಯೋಗ ಕೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಶಾಸಕರಾದ ಎಸ್.ಎ.ರಾಮದಾಸ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೈಸೂರು ಯೋಗದ ತವರೂರಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಯೋಗದ ಕೇಂದ್ರ ಎಂದು ಪರಿಗಣಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ ಎಂದರು. ಮೈಸೂರಿನ ಯೋಗ ದಿಗ್ಗಜರಾದ ಕೃಷ್ಣಮಾಚಾರ್, ಕೆ.ಪಟ್ಟಾಭಿ ಜೊಯಿಸ್, ಬಿಎಸ್ಕೆ ಐಯ್ಯಂಗರ್ ಹಾಗೂ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆಯನ್ನ ಸ್ಮರಿಸಿದರು.
ಇಂದು ಇಡೀ ವಿಶ್ವ ಕೊರೊನಾ ಸಮಸ್ಯೆ ಎದುರಿಸುತ್ತಿರುವಾಗ ಕೊರೊನಾಗೆ ಪ್ರಾಥಮಿಕ ಮದ್ದಾಗಿ ಭಾರತೀಯ ವೈದ್ಯ ಪದ್ಧತಿ ಮತ್ತು ಯೋಗ ತನ್ನದೇ ಆದ ದೊಡ್ಡ ಪಾತ್ರ ವಹಿಸುತ್ತದೆ ಎಂಬುದು ಎಲ್ಲರ ಆಕಾಂಕ್ಷೆ. ಹೀಗಿರುವಾಗ ಮೈಸೂರು ಸಂಶೋಧನೆ ಮೂಲಕ ವಿಶ್ವಕ್ಕೆ ಯೋಗ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೊರೊನಾದಿಂದ ಜೀವನವೇ ಲಾಕ್ಡೌನ್ ಆದಂತಿದ್ದು, ಈ ಲಾಕ್ಡೌನ್ ತೆಗೆಯಬೇಕಿರುವುದು ಸರ್ಕಾರವಲ್ಲ. ಲಾಕ್ಡೌನ್ ತೆಗೆಯುವ ದೊಡ್ಡ ಕೆಲಸ ಯೋಗದ ಮೂಲಕ ಆಗಬೇಕು. ಮುಂದಿನ ವರ್ಷ ೮ನೇ ಅಂತರಾಷ್ಟ್ರೀಯ ಯೋಗ ದಿನವನ್ನ ಲಕ್ಷಾಂತರ ಜನರು ಸೇರಿ ಆಚರಿಸುವಂತಾಗಬೇಕು ಎಂದು ಆಶಿಸಿದರು.
ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಆಯುಷ್ ಇಲಾಖೆ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ನೆಹರು ಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವು ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯೆ ಪುಷ್ಪಾ ಚಾಲಾನಾ ಕ್ರಿಯೆ ನಡೆಸಿಕೊಟ್ಟರು. ಜಿಎಸ್ಎಸ್ ಯೋಗ ತಂಡದ ಸದಸ್ಯೆ ಕುಮಾರಿ ಪೂಜಾ ಆಸನಗಳನ್ನ ಪ್ರಸ್ತುತಪಡಿಸಲು ನೆರವಾದರು. ಯೋಗ ಫೆಡರೇಶನ್ ಆಫ್ ಮೈಸೂರು ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ ಶವಾಸನ ಕುರಿತು ವಿವರಣೆ ನೀಡಿದರು. ಜಿಎಸ್ಎಸ್ ಯೋಗ ಪ್ರತಿಷ್ಠಾನದ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿ ಅವರು ಪ್ರಾಣಾಯಾಮ ವಿಭಾಗ ನಡೆಸಿಕೊಟ್ಟರು. ಮೈಸೂರು ಯೋಗ ಸ್ಪೋರ್ಟ್ ಫೌಂಡೇಶನ್ನಿನ ಎಚ್.ಟಿ. ಭಾಸ್ಕರ್ ಧ್ಯಾನಾವಧಿಯನ್ನ ನಡೆಸಿಕೊಟ್ಟರು. ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ವಿಶ್ವತಿಲಕ್ ಸಂಕಲ್ಪ ನೆರವೇರಿಸಿದರು.
ಕೊರೊನಾ ಮಾರ್ಗಸೂಚಿ ಪಾಲಿಸುತ್ತಾ ಯೋಗಪಟುಗಳಾದ ಪೂಜಾ, ಲಕ್ಷ್ಮೀಮನೋಜ್ಞ, ಪವನ್, ಸೌರಭ, ನೀಲಮ್ಮ ರವರುಗಳು ೪೫ ನಿಮಿಷಗಳ ಯೋಗ ಶಿಷ್ಪಾಚಾರವನ್ನು ನೆರವೇರಿಸಿಕೊಟ್ಟರು. ಬಳಿಕ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಅಂತ್ಯಕಂಡಿತು.