ಇದೊಂದು ಬ್ಯಾಡ್ ಬಜೆಟ್: ತೆರಿಗೆ ಬಗ್ಗೆ ಗಂಭೀರ ಚಿಂತನೆ ಅಗತ್ಯ; ಸಿದ್ದರಾಮಯ್ಯ

1 min read

ಬೆಂಗಳೂರು,ಫೆ.3-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಬ್ಯಾಡ್ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯರಿಗಾಗಿ ಇಂದು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ವಿತ್ತೀಯ ಕಲಾಪ, ವಿಧೇಯಕಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಅಭಿವೃದ್ಧಿಯ ಪಾಲುದಾರಿಕೆ ಕುರಿತು ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಸಾಲದ ಚಿತ್ರದ ಬಗ್ಗೆ ಸಿದ್ದು ಗರಂ ಆಗಿದ್ದು, ಅಂಕಿ-ಅಂಶಗಳನ್ನ ಹೇಳಿಯೇ ಕೇಂದ್ರ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ದೇಶದಲ್ಲಿ ಹೆಚ್ಚಾಗುತ್ತಿರುವ ಸಾಲದ ಬಗ್ಗೆ ಸಿದ್ದು ಟೀಕಿಸಿದ್ದು,
ಕಳೆದ ಎರಡು ವರ್ಷಗಳಿಂದ ೧ ಲಕ್ಷದ ೪೩ ಸಾವಿರ ಕೋಟಿ ಸಾಲ ಜಾಸ್ತಿಯಾಗಿದೆ. ಇದರಿಂದಾಗಿ ಬಡ್ಡಿಯೂ ಜಾಸ್ತಿಯಾಗುತ್ತಿದೆ. ಪ್ರತಿ ವರ್ಷ ಬಡ್ಡಿಗಂತಲೇ ೨೩ ಸಾವಿರ ಕೋಟಿ ಎತ್ತಿಡಬೇಕಾಗಿದೆ.
ಇದರಿಂದಾಗಿ ಕೆಟ್ಟ ವ್ಯವಸ್ಥೆ ಕಡೆ ಹೋಗುತ್ತಿದೆ. ಯಾರು ಬೇಕಾದ್ರೂ ಬಜೆಟ್ ಮಂಡಿಸಬಹುದು, ಆದ್ರೆ ಫೈನಾನ್ಸ್ ಮಿನಿಸ್ಟರೇ ಉತ್ತರ ಕೊಡಬೇಕು. ಸಾಲ ಮಾಡಿ ಸಂಬಳ ಕೊಡುವುದನ್ನ ಮಾಡಬಾರದು ಇದೊಂದು ಬ್ಯಾಡ್ ಬಜೆಟ್ ಎಂದಿದ್ದಾರೆ.

ಸಾಲ ಮಾಡಿ ಬೇರೆ ಯೋಜನೆಗಳ ಮೇಲೆ ಖರ್ಚು ಮಾಡಬಾರದು. ಕೃಷಿ ,ಕೈಗಾರಿಕಾ ಸೇವಾ ವಲಯ ಈ ಮೂರು ವಲಯಗಳ ಮೇಲೆ ಖರ್ಚು ಮಾಡಬೇಕು. ಈ ಮೂರು ವಲಯಗಳಿಂದ ಜಿಡಿಪಿ ಹೆಚ್ಚಾಗುತ್ತೆ.
ಆಗ ರಾಷ್ಟ್ರ, ರಾಜ್ಯದ ಆಸ್ತಿ ಆಗುತ್ತೆ. ೨೦೨೦-೨೧ ರಲ್ಲಿ ಜಿಡಿಪಿ ಮೈನಸ್ ಆಗಿದೆ. ಅದಕ್ಕೆ ಕಾರಣ ಕೊರೊನಾ ಅಂತ ಹೇಳ್ತಾರೆ. ಶಾಸಕರು ಸಂವಿಧಾನ ಓದಬೇಕು. ನಿಮಗೆಲ್ಲಾ ಬಜೆಟ್ ಅರ್ಥ ಆಗಬೇಕು ಅಂದರೆ ಎಕನಾಮಿಕ್ ಕುರಿತ ಪುಸ್ತಕಗಳನ್ನ ಓದಬೇಕು. ಆಗ್ಲೇ ನೀವು ಬಜೆಟ್ ಬಗ್ಗೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗೋದು ಎಂದು ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ನೇರ ತೆರಿಗೆ, ಪರೋಕ್ಷ ತೆರಿಗೆ ಅಂತ ಮಾಡಲಾಗಿದೆ. ಯಾರಿಗೆ ಶಕ್ತಿ ಇದೆ ಅವರು ತೆರಿಗೆ ಕಟ್ಟಬೇಕು, ಅಶಕ್ತರಿಂದ ತೆರಿಗೆ ಬೇಡ ಅಂತ ಹೇಳಿದರು. ಇದನ್ನೇ ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರಿಗೆ ತೆರಿಗೆ ಹಾಕಿ ಬಡವರ ಕಲ್ಯಾಣ ಮಾಡಬೇಕು. ದ್ವಾಪರ ಕಾಲದ ಭೀಷ್ಮ ಮತ್ತು ಧರ್ಮರಾಯ ಕಾಲದ ಕಥೆ ಹೇಳಿದ ಅವರು, ರಾಜ ತೋಟ ಕಾಯುವ ಮಾಲಿ ಆಗಿರಬೇಕು. ಇದ್ದಿಲು ಮಾರುವ ರೀತಿ ಇರಬಾರದು. ಈಗ ಉಳ್ಳವರ ಮೇಲೆ ತೆರಿಗೆ ಕಡಿಮೆ ಆಗುತ್ತಿದೆ. ಬಡವರ ಮೇಲೆ ಹೆಚ್ಚು ತೆರಿಗೆ ಹಾಕಲಾಗುತ್ತಿದೆ. ಇದು ಬ್ಯಾಡ್ ಡೆವಲಪ್ಮೆಂಟ್. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಶೇ.70 ಇತ್ತು, ಜನ ಸಾಮಾನ್ಯರ ಮೇಲೆ ಶೇ.27 ಹಾಕಲಾಗ್ತಿದೆ. ಇದು ಕೆಟ್ಟ ತೆರಿಗೆ ಸಂಸ್ಕೃತಿ ಆಗಿದ್ದು, ಬದಲಾವಣೆ ಆಗಬೇಕು. ನಾನು ಸಾಲ ಮಾಡಲೇಬೇಡಿ ಅಂತ ಹೇಳಲ್ಲ. ಹಿಂದೆ ಈಗ, ಮುಂದೆಯೂ ಸಾಲ ಮಾಡಲೇಬೇಕು. ಅಭಿವೃದ್ಧಿ ದೃಷ್ಟಿಯಿಂದ ಸಾಲ ಅನಿವಾರ್ಯ ಎಂದರು.

ರಾಜ್ಯದಲ್ಲಿ 2018-19ರಲ್ಲಿ 1ಲಕ್ಷದ 42ಸಾವಿರ ಕೋಟಿ ಇತ್ತು. ಈ ವರ್ಷದ ಮಾರ್ಚ್‌ನಲ್ಲಿ 2ಲಕ್ಷ 46ಸಾವಿರ ಕೋಟಿ ಸಾಲ ಆಗಿದೆ. ಕಳೆದ ಒಂದು ವರ್ಷದಲ್ಲಿ 1ಲಕ್ಷದ 46ಸಾವಿರ ಕೋಟಿ ಹೆಚ್ಚು ಸಾಲ ಮಾಡಲಾಗಿದೆ.
ಬರೀ ಬಡ್ಡಿಗಾಗಿ 23ಸಾವಿರ ಕೋಟಿ ಹೆಚ್ಚು ಇಡಬೇಕು. ನಾವು ಕೆಟ್ಟ ಕಾಲದ ಕಡೆ ಹೋಗುತ್ತಿದ್ದೇವೆ ಅಂತ ಚಿತ್ರಣ ಇದೆ ಎಂದು ತಿಳಿಸಿದರು
.

ಜನಸಾಮಾನ್ಯರ ಮೇಲಿನ ತೆರಿಗೆಯ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದ ಸಿದ್ದರಾಮಯ್ಯ ಅವರು , ರಾಮಕೃಷ್ಣ ಹೆಗಡೆ ಅವರು 13 ವರ್ಷ ಕಾಲ ಬಜೆಟ್ ಮಂಡಿಸಿದರು. ನಾನೂ ಮಂಡಿಸಿದ್ದೆ. 1966-67ರಿಂದ 88ರ ವರೆಗೂ ಮಂಡಿಸಿದರು. ನಾನು 95-96 ರಿಂದ ಮಂಡಿಸಲು ಪ್ರಾರಂಭಿಸಿ, 2018ರ ವರೆಗೂ ಮಂಡಿಸಿದ್ದೇನೆ. ನಾನೇ ಹೆಚ್ಚು ಮಂಡಿಸಿದವನೇನು ಅಲ್ಲ. ಸ್ವಾತಂತ್ರ್ಯ ಬಂದ ಬಳಿಕ ಬಜೆಟ್ ಗಾತ್ರ, ಗಣನೀಯವಾಗಿ ಬೆಳೆದಿದೆ. 1953ರಲ್ಲಿ ಕೆಂಗಲ್ ಹನುಮಂತಯ್ಯ ಅವಧಿಯಲ್ಲಿ ಬಜೆಟ್ ಗಾತ್ರ 21ಕೋಟಿ 3ಲಕ್ಷ ಇತ್ತು. ಈಗ 2,46,207 ಕೋಟಿ ತಲುಪಿದೆ. ಕರದನಾಟಕದಲ್ಲಿ ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡಿಸಿದ್ದೇವೆ. ರಾಜ್ಯಪಾಲರು ನಿಗದಿಪಡಿಸಿದ ದಿನದಂದು ಬಜೆಟ್ ಮಂಡಿಸಬೇಕು. ಸಂವಿಧಾನದ ಪ್ರಕಾರ ಬಜೆಟ್ ಅನ್ನೋದು ಬಹಳ ಮುಖ್ಯ. ಬಜೆಟ್ ಅಂದರೆ ಫೈನಾನ್ಸಿಯಲ್ ಆನ್ಯುಯಲ್ ಸ್ಟೇಟ್ಮೆಂಟ್ ಈಚ್ ಆಂಡ್ ಎಕ್ಸ್‌ಪೆಂಡೀಚರ್. ಇದನ್ನೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಅಂತ ಹೇಳಿದರು. ಆಯವ್ಯಯ ವ್ಯಕ್ತಿ, ಕುಟುಂಬ, ಸಂಸ್ಥೆ, ಕಂಪನಿಗಳ ಖರ್ಚು ವೆಚ್ಚಗಳ ವ್ಯವಸ್ಥಿತ ರೂಪು ರೇಷೆ ಮಾಡಿಕೊಳ್ಳಬೇಕು. ಖರ್ಚು ಕಡಿಮೆ ಇದ್ದು, ಆದಾಯ ಹೆಚ್ಚಿದ್ದರೆ ಉಳಿತಾಯ ಬಜೆಟ್ ಅಂತ ಕರೀತಾರೆ. ಉಳಿತಾಯ ಹಣದಲ್ಲಿ ಅಭಿವೃದ್ಧಿ ಮಾಡಬಹುದು. ರೆವಿನ್ಯೂ ರೆಸೀಡ್ಸ್, ಕ್ಯಾಪಿಟಲ್ ರೆಸೀಡ್ಸ್ ಅಂತ ಎರಡು ಭಾಗ. ಕಮಿಟೆಡ್ ಎಕ್ಸ್‌ಪೆಂಡೀಚರ್ ಅನ್ನ ಖರ್ಚು ಮಾಡಲೇಬೇಕು.
ಯಾವುದು ಅಂದ್ರೆ ಸಂಬಳ, ಪೆನ್‌ಶನ್, ಇತರೆ ಖರ್ಚುಗಳು. ರೆವಿನ್ಯೂ ಆದಾಯಕ್ಕಿಂತ ಕಮಿಟೆಡ್ ಎಕ್ಸ್‌ಪೆಂಡೀಚರ್ ಹೆಚ್ಚಾದ್ರೆ ಸಾಲ ಮಾಡಿಕೊಳ್ಳಬೇಕಾಗಲಿದೆ. ನಮ್ಮ‌ರಾಜ್ಯದ ಮುನ್ನೋಟ ಐದು ವರ್ಷಗಳ ಕಾಲ ಇರಲಿದೆ. ನಾನು ಹಣಕಾಸು ಮಂತ್ರಿ ಆಗಿದ್ದಾಗ ಕಮಿಟೆಡ್ ಎಕ್ಸ್‌ಪೆಂಡೀಚರ್ ಶೇ.80 ಮೀರಿರಲಿಲ್ಲ. ಈಗ ಅದು ಶೇ.102 ಆಗಿದೆ. ಇದನ್ನ ಸರಿಮಾಡಿಕೊಳ್ಳಬೇಕು ಅಂತ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಅನಗತ್ಯ ಖರ್ಚು ಕಡಿಮೆ ಮಾಡಿ, ಕಮಿಟೆಡ್ ಎಕ್ಸ್‌ಪೆಂಡೀಚರ್ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ರಾಜ್ಯದ ಅಭಿವೃದ್ಧಿ ಕುಂಟಿತ ಆಗಲಿದೆ ಎಂದರು.

ಬಜೆಟ್ ಅನ್ನೋದು ಡ್ರೈ ಸಬ್ಜೆಕ್ಸ್, ಆಸಕ್ತಿ ಬಳಸಿಕೊಂಡರೆ ಇಂಟ್ರಸ್ಟಿಂಗ್ ಸಬ್ಕೆಕ್ಟ್ ಆಗಲಿದೆ. ಬಜೆಟ್ ಅಂಕಿ ಅಂಶಗಳು ಅಲಂಕಾರಿಕವಾಗಿ ಇರಬಾರದು. ವಾಸ್ತವಿಕವಾಗಿ ಕೂಡಿದ್ದರೆ ಮಾತ್ರ ಉತ್ತಮ ಬಜೆಟ್ ಆಗಲಿದೆ. ತೆರಿಗೆ ಸಂಗ್ರಹ ಸ್ವಾತಂತ್ರ್ಯ ಪೂರ್ವ, ನಂತರವೂ ಇದೆ. ತೆರಿಗೆ ಇಲ್ಲದೆ ಹೋದರೆ ಅಭಿವೃದ್ಧಿ ಸಾಧ್ಯವಿಲ್ಲ. ವೇದಗಳ ಕಾಲದಲ್ಲಿ ಕರಗಳನ್ನ ಬಲಿ ಅಂತ ಕರೆಯುತ್ತಿದ್ದರು. ಭೂಮಿ ಮೇಲೆ ಹಾಕುವ ಕಂದಾಯ ಶೇ.30 ಇತ್ತು, ಈಗ ಕಡಿಮೆಯಾಗಿದೆ. ತೋಟಗಾರಿಕಾ ಬೆಳೆಗಳ ಮೇಲೆ ಈಗ ಕಂದಾಯ ಇಲ್ಲ, ಭೂಕಂದಾಯ ಈಗ ತೆಗೆಯಲಾಗಿದೆ ಎಂದರು.

ಮುಂದುವರಿದು ಮಾತನಾಡಿದ ಅವರು, ಬಸವರಾಜ್ ಹೊರಟ್ಟಿ ಏಳು ಬಾರಿ ಪರಿಷತ್ ಸದಸ್ಯರಾಗಿದ್ದು, ಈಗ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನಗೂ ಹೊರಟ್ಟಿ ಅವರಿಗೂ ಧೀರ್ಘಕಾಲದ ಸ್ನೇಹ. ಹೀಗಾಗಿ ಅನೇಕ ಸಂದರ್ಭದಲ್ಲಿ ಹೊಗಳಿಕೆ ಹಾಗೂ ತೆಗಳಿಕೆ ಎರಡೂ ಮಾಡ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳಿಕೆ ಮತ್ತು ತೆಗಳಿಕೆಯನ್ನ ಸಮಚಿತ್ತವಾಗಿ ಸ್ವೀಕರಿಸಬೇಕು. ಆಗಾ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕರ್ನಾಟಕ ವಿಧಾನಪರಿಷತ್ ದೇಶದಲ್ಲೇ ಮಾದರಿ ಪರಿಷತ್. ಮಾಧ್ಯಮದಲ್ಲಿ ಕೆಲವೊಮ್ಮೆ ಟೀಕೆ ಟಿಪ್ಪಣಿ ಬಂದಾಗ ನೋವಾಗುತ್ತೆ.
ಪಬ್ಲಿಕ್ ಅಕೌಂಟ್ ಕಮಿಟಿ ಶ್ರೇಷ್ಠ ಕಮಿಟಿ. ಹೊಸದಾಗಿ ಬಂದವರಿಗೆ ಬಹಳ ಒಳ್ಳೆಯ ಕಾರ್ಯಕ್ರಮ.
ನಿಮ್ಮ ಅನಿಸಿಕೆಗಳನ್ನು ಕೂಡ ತಿಳಿಸಲು ಅವಕಾಶ ನೀಡುತ್ತೇವೆ ಎಂದರು.

About Author

Leave a Reply

Your email address will not be published. Required fields are marked *