ಟಿ.ನಟರಾಜನ್ ಗೆ ಕೋವಿಡ್ ಪಾಸಿಟಿವ್: ನಿಗದಿಯಂತೆ ನಡೆಯುತ್ತಿರುವ DC v/s SRH ಪಂದ್ಯ
1 min readದುಬೈ,ಸೆ.22- ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟಿ.ನಟರಾಜನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಇಂದಿನ ಐಪಿಎಲ್ ಪಂದ್ಯ ರದ್ದಾಗಬಹುದು ಎನ್ನಲಾಗಿತ್ತು.
ಆದರೆ ನಿಗದಿಯಂತೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ನಡೆಯುತ್ತಿದೆ.
ಬಿಸಿಸಿಐ ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ಸ್ಪಷ್ಟಪಡಿಸಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ದುಬೈಯಲ್ಲಿ ನಡೆಯುತ್ತಿರುವ ಟೂರ್ನಿಯ ದ್ವೀತಿಯಾರ್ಧದ ವೇಳೆಯಲ್ಲೂ ಆಟಗಾರನಿಗೆ ಸೋಂಕು ತಗುಲಿದೆ. ಇದರಿಂದಾಗಿ ಕೋವಿಡ್ ಕರಿನೆರಳು ಮತ್ತೆ ಟೂರ್ನಿ ಮೇಲೆ ಆವರಿಸಿದೆ.
ಟಿ.ನಟರಾಜನ್ಗೆ ಕೋವಿಡ್ ಸೋಂಕು ತಗುಲಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ. ಅವರಲ್ಲಿ ರೋಗಲಕ್ಷಣಗಳು ಕಂಡುಬಂದಿಲ್ಲ. ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಪ್ರತ್ಯೇಕ ವಾಸದಲ್ಲಿರುವಂತೆ ಸೂಚಿಸಲಾಗಿದೆ. ಸಹ ಆಟಗಾರ ವಿಜಯ್ ಶಂಕರ್, ತಂಡದ ವ್ಯವಸ್ಥಾಪಕ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯ ಅಂಜನಾ ವಣ್ಣನ್, ಲಾಜಿಸ್ಟಿಕ್ ಮ್ಯಾನೇಜರ್ ತುಷಾರ್ ಖಾಡೇಕರ್ ಹಾಗೂ ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಪ್ರತ್ಯೇಕ ವಾಸದಲ್ಲಿದ್ದಾರೆ. ಏತನ್ಮಧ್ಯೆ ಇಂದಿನ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇತರೆಲ್ಲ ಆಟಗಾರರನ್ನು ಸ್ಥಳೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಫಲಿತಾಂಶ ವರದಿಯಾಗಿವೆ. ಹಾಗಾಗಿ ಇಂದಿನ ಪಂದ್ಯವು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿತ್ತು.