ನಾಲಿಗೆ- ಮೆದುಳಿಗೆ ಸಂಪರ್ಕ ಕಟ್ ಆದ ಈಶ್ವರಪ್ಪ ಬಗ್ಗೆ ನಾನು ಮಾತಾಡಲ್ಲ- ಸಿದ್ದರಾಮಯ್ಯ.!

1 min read

ಬೆಂಗಳೂರು: ‌ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.

ಸ್ವಾತಂತ್ರ್ಯ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ 180 ಕೋಟಿ ಖರ್ಚು ಮಾಡಿಸಿ ಜಾತಿಜನಗಣತಿ ಮಾಡಿಸಿದ್ದೇನೆ. ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರೂ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ಬೇಡಿಕೆ ಮುಂದಿಟ್ಟಿದ್ದಾರೆ.

ಹೀಗಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸನ್ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ ಎಂದರು.

ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದಿದ್ದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಜಿ.ಟಿ.ದೇವೇಗೌಡ ನನ್ನ ಜತೆಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜತೆಗೂ ಚರ್ಚಿಸಿದ್ದಾರೆ.

ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ ತಿಳಿಸಲಾಗುವುದು ಎಂದರು.

ಮೈಸೂರು ಪಾಲಿಕೆ ಬಿಜೆಪಿ ವಶವಾದ ಕುರಿತು ಪ್ರಸ್ತಾಪಿಸಿದ ಅವರು, ಜೆಡಿಎಸ್ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ. ಹೀಗಾಗಿ ಮೂರು ಪಕ್ಷದವರು ಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಅತಿ ಹೆಚ್ಚು ಸ್ಥಾನ ಬಿಜೆಪಿ ಗೆದ್ದಿದ್ದರಿಂದ ಅವರಿಗೆ ಮೇಯರ್ ಸ್ಥಾನ ಹೋಗಿದೆ.

ಮೆಟ್ರೋ ಅಧಿಕಾರಿಗಳು ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ಕೇಂದ್ರ ಸಚಿವರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರೆ ತಪ್ಪಲ್ಲ. ಆದರೆ ಕನ್ನಡ ನೆಲದಲ್ಲಿ ಮೆಟ್ರೋ ಅಧಿಕಾರಿಗಳು ಕನ್ನಡಕ್ಕೆ ಅವಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದರು.

ಕೋವಿಡ್ ಮೂರನೇ ಅಲೆ ಆತಂಕದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚರ್ಚಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕೊರೋನಾ ನಿಯಂತ್ರಣದಲ್ಲಿ ಇದ್ದಾಗ ಸೂಕ್ತ ಮುನ್ನೆಚ್ಚರಿಕೆ ಮತ್ತು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯುವುದು ಒಳ್ಳೆಯದು.

ಹಾಗೆಯೇ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಆದರೆ ಅತಿ ಹೆಚ್ಚು ಜನ ಗುಂಪು ಸೇರದಂತೆ, ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಣೆ ಮಾಡದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜನಾಶೀರ್ವಾದ ಯಾತ್ರೆಗೆ ಸಹಸ್ರಾರು ಮಂದಿಯನ್ನು ಸೇರಿಸಿ ಕೇಂದ್ರ ಸಚಿವರು ಮತ್ತು ಬಿಜೆಪಿ ಕೋವಿಡ್ ನಿಯಮ ಉಲ್ಲಂಘಿಸಿದ್ದನ್ನು ತೀವ್ರವಾಗಿ ಖಂಡಿಸಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಫ್ಯೂಸ್ ಹೋಗಿದೆ ಎನ್ನುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ವಿಧಾನಸಭಾ ಚುನಾವಣೆ ಬರಲಿ. ನಾಡಿನ ಜನ ಯಾರ ಫ್ಯೂಸ್ ಕಿತ್ತಾಕುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನಾಲಗೆಗೂ ಮತ್ತು ಮೆದುಳಿಗೂ ಸಂಪರ್ಕವೇ ಕಟ್ ಆಗಿರುವ ಈಶ್ವರಪ್ಪರ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಕಿಡಿ ಕಾರಿದರು.

ತೂಕ ಕಡಿಮೆಯಾಗಿದೆ:
ಹತ್ತು ದಿನಗಳ ಚಿಕಿತ್ಸೆ ಬಳಿಕ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಇಂದು ವಾಪಾಸಾಗಿದ್ದೇನೆ. ಕೊರೊನಾ ಸೋಂಕಿಗೆ ಒಳಗಾದ ಬಳಿಕ ದೇಹದ ತೂಕ ಮೂರ್ನಾಲ್ಕು ಕೆ.ಜಿ. ಹೆಚ್ಚಾಗಿತ್ತು. ಈಗ ಮೂರು ಕೆ.ಜಿ. ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

About Author

Leave a Reply

Your email address will not be published. Required fields are marked *