ಜುಲೈ 7ಕ್ಕೆ ಬಜೆಟ್ ಮಂಡನೆ- ಸಿದ್ದರಾಮಯ್ಯ!

1 min read

ಜುಲೈ ಏಳರಂದು ಆಯವ್ಯಯ ಮಂಡನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ದಾವಣಗೆರೆ, ಜೂನ್ 05: ಜುಲೈ ಮೂರರಂದು ಆಯವ್ಯಯ ಅಧಿವೇಶನ ಬಹುತೇಕ ಪ್ರಾರಂಭವಾಗಲಿದ್ದು, ಏಳರಂದು ಬಜೆಟ್ ಮಂಡಿಸಲಾಗುವುದು. ಈ ಬಗ್ಗೆ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ದಾವಣಗೆರೆ ಹೆಲಿಪ್ಯಾಡಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಬಾರಿಯ ಬಜೆಟ್ ಗಾತ್ರದ ಬಗ್ಗೆ ಬಜೆಟ್ ಸಿದ್ಧತೆಗಳ ಸಭೆ ಪ್ರಾರಂಭವಾದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರ 3.09 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು ಎಂದರು.

ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. 1964 ಕಾಯ್ದೆಯಲ್ಲಿ 12 ವರ್ಷ ತುಂಬಿರುವ ಬರಡು ಹಾಗೂ ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳ ಬಗ್ಗೆ ಹೇಳಲಾಗಿದೆ. ಆಮೇಲೆ ತಿದ್ದುಪಡಿಯಾಗಿದೆ ಎಂದರು.

ರೈತರಿಗೆ ತೊಂದರೆಯಾಗದಂತೆ ಬೀಜ ಗೊಬ್ಬರಗಳ ಸರಬರಾಜು ಆಗಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವೀಡಿಯೋ ಸಂವಾದದ ಮುಖಾಂತರ ತಿಳಿಸಲಾಗಿದೆ. ಪ್ರವಾಹ ಉಂಟಾದರೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ ಎಂದರು.

ವಿದ್ಯುತ್ ದರ ಏರಿಕೆ
ವಿದ್ಯುತ್ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ವಿದ್ಯುತ್ ದರ ಏರಿಕೆ ಆರ್.ಇ.ಸಿ ನಲ್ಲಿ ಮೊದಲೇ ತೀರ್ಮಾನವಾಗಿದೆ. ಹಿಂದೆಯೇ ಆಗಿದ್ದ ತೀರ್ಮಾನವನ್ನು ಈಗ ಜಾರಿ ಮಾಡಲಾಗಿದೆ ಎಂದರು.

ಇಂದಿರಾ ಕ್ಯಾಂಟೀನ್‍
ಇಂದಿರಾ ಕ್ಯಾಂಟೀನ್‍ಗಳನ್ನು ಪುನರಾರಂಭಿಸಲು ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ. ಕ್ಯಾಂಟೀನುಗಳ ನೌಕರರಿಗೆ ವೇತನ ದೊರೆತಿಲ್ಲವಾದರೆ ಅಥವಾ ಬಾಕಿ ಇದ್ದರೆ ಅದನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾಕತಾಳೀಯ
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಣೆಯನ್ನು ಮಾಡಲಾಗಿತ್ತು. ಕಾಕತಾಳೀಯವೆಂಬಂತೆ ಮುಖ್ಯಮಂತ್ರಿಯಾಗಿ ಮೊದಲನೇ ಪ್ರವಾಸ ದಾವಣಗೆರೆ ಜಿಲ್ಲೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

About Author

Leave a Reply

Your email address will not be published. Required fields are marked *