ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯ ಮರು ಲೋಕಾರ್ಪಣೆ: ಸುತ್ತೂರು ಶ್ರೀಗಳಿಂದ ಮೆಚ್ಚುಗೆ

1 min read

ಮೈಸೂರು,ಜ.26-ಕಳೆದ 9 ತಿಂಗಳ ಹಿಂದೆ ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾಗಿದ್ದ ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯ ಇದೀಗ ಮರು ಲೋಕಾರ್ಪಣೆಗೊಂಡಿದೆ. ಗ್ರಂಥಾಲಯದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡ ಕಲಾರತ್ನರ ಫೋಟೋಗಳು, ಪುಸ್ತಕಗಳು ಕಾಣಸಿಗುತ್ತವೆ.
ಗಣರಾಜ್ಯೋತ್ಸವ ದಿನವಾದ ಇಂದು ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಪ್ರೀತಿಯ ಗ್ರಂಥಾಲಯ ಲೋಕಾರ್ಪಣೆಗೊಂಡಿದೆ. ಆ ಮೂಲಕ ಸೈಯದ್ ಅವರ ಕನಸು ಮತ್ತೊಮ್ಮೆ ನನಸಾಗಿದೆ.


ಕೆಲ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳವರು ನೀಡಿದ ಹಣದಿಂದ ಸೈಯದ್ ಅವರು ರಾಜೀವ್ ನಗರದ ಎರಡನೇ ಹಂತದಲ್ಲಿ ಮತ್ತೊಮ್ಮೆ ಗ್ರಂಥಾಲಯ ಸ್ಥಾಪಿಸಿದ್ದಾರೆ. ಈ ಗ್ರಂಥಾಲಯವನ್ನು ಇಂದು ಮಕ್ಕಳ ಜೊತೆಗೂಡಿ ಪೂಜ್ಯ ಸುತ್ತೂರು ಶ್ರೀಗಳು ಉದ್ಘಾಟಿಸಿದರು.


ಕಳೆದ ವರ್ಷ ಏಪ್ರಿಲ್‌ನಲ್ಲಿ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಗ್ರಂಥಾಲಯಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಇಟ್ಟಿದ್ದರು. ಈ ವೇಳೆ ಬಹಳ ನೊಂದು ಕಣ್ಣೀರಿಟ್ಟಿದ್ದ ಇಸಾಕ್ ಅವರಿಗೆ ಹಲವರು ನೆರವು ನೀಡಿದ್ದರು. ಅಲ್ಲದೇ ಸರ್ಕಾರದ ವತಿಯಿಂದಲೇ ಮತ್ತೊಮ್ಮೆ ಗ್ರಂಥಾಲಯ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು.ಅಲ್ಲದೆ ಮುಡಾ ವತಿಯಿಂದ ಗ್ರಂಥಾಲಯಕ್ಕೆ ಜಾಗವನ್ನು ನೀಡಲಾಗಿತ್ತು. ಆದರೆ ಗ್ರಂಥಾಲಯ ನಿರ್ಮಾಣ ಭರವಸೆ ಮಾತ್ರ ಹಾಗೆಯೇ ಉಳಿಯಿತು.
ಹೀಗಾಗಿ ಇಸಾಕ್ ಅವರು ತಮಗೆ ನೆರವಿನ ಹಣದಿಂದಲೇ ಮತ್ತೊಮ್ಮೆ ಗ್ರಂಥಾಲಯ ಸ್ಥಾಪಿಸಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹ್ಮದ್ 2 ಲಕ್ಷ ರೂ., ಸಂಸದ ಪ್ರತಾಪ್‌ ಸಿಂಹ 50 ಸಾವಿರ ರೂ. ಸುತ್ತೂರು ಶ್ರೀಗಳು ಸಾಕಷ್ಟು ಪುಸ್ತಕ ಹಾಗೂ ವೈಯಕ್ತಿಕ 10 ಸಾವಿರ ರೂ., ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 25 ಸಾವಿರ ರೂ. ನೆರವು ನೀಡಿದ್ದರು. ಇದರ ಜೊತೆಗೆ ಹಲವು ಸಂಘ-ಸಂಸ್ಥೆ ನೀಡಿದ ಅಲ್ಪಸ್ವಲ್ಪ ಹಣ ಜಮಾವಣೆ ಮಾಡಿ ಮೂರುವರೆ ಲಕ್ಷ ರೂ. ನಲ್ಲಿ ಗ್ರಂಥಾಲಯ ಸ್ಥಾಪಿಸಿದ್ದಾರೆ. ಆದರೆ ಸರ್ಕಾರ ಭರವಸೆ ಕೊಟ್ಟು ಈಡೇರಿಸದೇ ಇರುವುದಕ್ಕೆ ಇಸಾಕ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಸುತ್ತೂರು ಶ್ರೀಗಳು, ಶ್ರೀಮಠದಿಂದ ಸಾಕಷ್ಟು ಪುಸ್ತಕಗಳನ್ನ ಉಚಿತವಾಗಿ ನೀಡಿದ್ದು, ಆ ಪುಸ್ತಕಗಳು ಕೂಡ ಓದಲು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಅಲ್ಲದೆ, ಕನ್ನಡ ಓದುವ ಬೆಳೆಸುವ ಕೆಲಸ ಇಂತಹ ಸ್ಥಳದಲ್ಲಿ ಆಗುತ್ತಿರೋದು ಸಂತಸ ಇದೆ. ಇದೇ ರೀತಿ ಹಲವರು ಮಾಡಿದರೆ ಎಲ್ಲರಿಗೂ ಓದಿನ ಮಹತ್ವ ತಿಳಿಯಲಿದೆ. ಕನ್ನಡ ಪ್ರೇಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸೈಯದ್ ಇಸಾಕ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಗ್ರಂಥಾಲಯ ವೀಕ್ಷಿಸಿ ಗ್ರಂಥಾಲಯ ಇಲ್ಲದ ಕಡೆ ಛಲದಿಂದ ಗ್ರಂಥಾಲಯ ನಿರ್ಮಿಸಿ ಕನ್ನಡ ಮಹತ್ವ ಸಾರುತ್ತಿರುವ ಇಸಾಕ್ ಅವರ ಕಾರ್ಯ ಮೆಚ್ಚುವಂತದು. ಇದು ಹೀಗೆ ಮುಂದುವರೆಯಲಿ ಎಂದು ಶುಭಕೋರಿದರು.
ಒಟ್ಟಾರೆ, ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡ ಪ್ರೇಮಿ ಸೈಯದ್ ಇಸಾಕ್ ಪಣ ತೊಟ್ಟಿದ್ದಾರೆ. ಅಧಿಕಾರಿಗಳು ಕೊಡದಿದ್ದರೂ ಪರವಾಗಿಲ್ಲ, ಸಾರ್ವಜನಿಕರು ಕೆಲ ಜನಪ್ರತಿನಿಧಿಗಳಿಂದ ನೆರವಿನಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದೇನೆಂದು ಎದೆ ತಟ್ಟಿ ಹೇಳ್ತಿರೋದು ಕನ್ನಡದ ಮಹತ್ವ ಎಷ್ಟು ದೊಡ್ಡದು ಎಂಬುದನ್ನ ಸಾಬೀತು ಮಾಡಿದೆ‌.

About Author

Leave a Reply

Your email address will not be published. Required fields are marked *