ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ: ಸಿಎಂ ಯಡಿಯೂರಪ್ಪ
1 min readಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಗ್ಗೆ ಇವತ್ತು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆ ಇರುವ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ಸಭೆಯ ಮುಖ್ಯಾಂಶಗಳು:
- ರಾಜ್ಯ ಮಟ್ಟದಲ್ಲಿ ಅಪರ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿ.ನಿ) ಹಾಗೂ ಅಭಿವೃದ್ಧಿ ಆಯುಕ್ತರು ಅಧ್ಯಕ್ಷತೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಋತುಮಾನ ಪರಿಸ್ಥಿತಿ ಅವಲೋಕನ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ.
- ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021 ನ್ನು ಸಿದ್ದಪಡಿಸಲಾಗಿದೆ.
- ರಾಜ್ಯದಲ್ಲಿ 1710 ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ವಿಪತ್ತು ನಿರ್ವಹಣೆ ಕ್ರಿಯಾ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ತರಬೇತಿ ನೀಡಲಾಗಿದೆ.
- ಪ್ರವಾಹ ಪರಿಸ್ಥಿತಿಗಳಲ್ಲಿ ಜಲಾಶಯಗಳ ಹರಿವು ನಿರ್ವಹಣೆಗೆ ಬೇಕಾದ ಮಾಹಿತಿ ವಿನಿಮಯಕ್ಕೆ ಅಂತರರಾಜ್ಯ ಸಮನ್ವಯತೆ ಸಾಧಿಸಲಾಗಿದೆ. ಇಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರೊಂದಿಗೆ ಸಭೆಯನ್ನೂ ನಡೆಸಲಾಗಿದೆ.
- ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಕಾರ್ಯಪಡೆ, ಕಾರ್ಯಾಚರಣೆ ತಂಡಗಳನ್ನು ಹಾಗೂ ವಾಟ್ಸ ಆಪ್ ತಂಡಗಳ ರಚನೆ ಮಾಡಲಾಗಿದೆ.
- ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ಗುರುತಿಸಲಾಗಿದೆ.
- ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಪ್ರವಾಹ ಮುನ್ಸೂಚನೆ ಕೋಶವನ್ನು ಸ್ಥಾಪಿಸಲಾಗಿದೆ.
- ರಕ್ಷಣಾ ಕಾರ್ಯಚಾರಣೆಗೆ ಬೇಕಾದ ಅಗತ್ಯ ಪರಿಕರಗಳ ಕ್ರೋಢೀಕರಣ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ.
- ಪ್ರವಾಹ ರಕ್ಷಣಾ ಕಾರ್ಯಾಚರಣೆಗಾಗಿ 4 ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡ(NDRF) ಗಳನ್ನು ರಾಯಚೂರು, ಕೊಡಗು, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
- ರಾಜ್ಯದಿಂದ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ರಾಜ್ಯ ವಿಪತ್ತು ಸ್ಪಂದನಾ ತಂಡ (SDRF) ತಂಡವನ್ನು ಬಲಪಡಿಸಿ, ತುರ್ತು ಪರಿಹಾರಕ್ಕೆ ಬೇಕಾದ ಪರಿಕರ ಸಾಮಾಗ್ರಿಗಳೊಂದಿಗೆ ಸನ್ನದ್ದಗೊಳಿಸಿದೆ.
- ಜಿಲ್ಲಾಧಿಕಾರಿಗಳ ಬಳಿ ವಿಪತ್ತು ನಿರ್ವಹಣೆಗೆ ಸುಮಾರು ಸಾವಿರ ಕೋಟಿ ರೂ. ಗಳಷ್ಟು ಲಭ್ಯವಿದೆ.
ಇಂದಿನ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಯಿತು:
- ಜಿಲ್ಲಾ ಮಟ್ಟದಲ್ಲಿ ನೀವು ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.
- ಜನ, ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರೊಂದಿಗೆ ಕೋವಿಡ್ 19 ಸೋಂಕಿನ ಕುರಿತು ಸಹ ಎಚ್ಚರಿಕೆ ವಹಿಸಬೇಕಿದೆ.
- ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಮತ್ತಿತರ ಸಂಪರ್ಕ ಸಾಧನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಹಾಗೂ ತುರ್ತು ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಖರೀದಿಸಲು ಕ್ರಮ ಕೈಗೊಳ್ಳುವುದು.
- ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಅವರಿಗೆ ಅಗತ್ಯ ಮೂಲಸೌಕರ್ಯಗಳುಳ್ಳ ಕಾಳಜಿ ಕೇಂದ್ರಗಳು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತಿ ಅಗತ್ಯ.
- ಪ್ರವಾಹ ನಿರ್ವಹಣೆಗಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರ ಸಹಕಾರವನ್ನು ಪಡೆದುಕೊಳ್ಳುವುದು.
- ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಹದ ಪರಿಣಾಮ ಅತ್ಯಂತ ಕಡಿಮೆಯಾಗುವಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಯಿತು.
- ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳಾಂತರಿಸಿದ ಕೆಲವು ಗ್ರಾಮಗಳಿಗೆ ಗ್ರಾಮಸ್ಥರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.