ಮೈಸೂರು ದಸರಾ: ಗಜಪಡೆಗೆ ವಿಶೇಷ ಭಕ್ಷ್ಯ ಭೋಜನ

1 min read
ಗಜಪಡೆಗೆ ತಯಾರಾಗಿರುವ ವಿಶೇಷ ಆಹಾರ

ಮೈಸೂರು,ಸೆ.25-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ದಸರಾದ ಸಂಭ್ರಮ ಕಳೆಗಟ್ಟಿದ್ದು, ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಭಕ್ಷ್ಯ ಭೋಜನಗಳನ್ನು ನೀಡಲಾಗುತ್ತಿದೆ.
ದಸರಾ ಆನೆಗಳ ಆರೋಗ್ಯದ ಬಗ್ಗೆ ಇಲಾಖೆ ಸಂಪೂರ್ಣ ನಿಗಾ ಇರಿಸಲಾಗಿದ್ದು, ಆನೆಗಳ ಆರೋಗ್ಯಕ್ಕಾಗಿ ವಿಶೇಷ ಆಹಾರ ತಯಾರಿ ಮಾಡಲಾಗುತ್ತಿದೆ. ಪ್ರತಿಯೊಂದು ಆನೆಗೂ ಸುಮಾರು 15 ಕೆ.ಜಿಯಷ್ಟು ವಿಶೇಷ ಆಹಾರ ನೀಡಲಾಗುತ್ತಿದೆ. ಪ್ರತಿನಿತ್ಯ ತಾಲೀಮು ಮುಗಿದ ನಂತರ ಆನೆಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ.


ಆನೆಗಳಿಗೆ ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸಲಕ್ಕಿ, ಗೆಡ್ಡೆ ಕೋಸು, ಮೂಲಂಗಿ, ಸವತೆಕಾಯಿ, ಕ್ಯಾರೆಟ್, ಬಿಟ್ರೋಟ್, ಈರುಳ್ಳಿ,  ಬೆಣ್ಣೆ,ಉಪ್ಪು ಮಿಶ್ರಣದ ಮುದ್ದೆ ನೀಡಲಾಗುತ್ತಿದೆ. ಈ ಎಲ್ಲಾ ಆಹಾರ ಪದಾರ್ಥಗಳನ್ನು ಹದವಾಗಿ ಬೇಯಿಸಿ ಮುದ್ದೆ ಮಾಡಿ ವಿಶೇಷ ಆಹಾರ ತಯಾರಿಸಿ ದಸರಾ ಗಜಪಡೆಗೆ ನೀಡಲಾಗುತ್ತಿದೆ.
8 ಆನೆಗಳಿಗೆ ಪ್ರತಿನಿತ್ಯ 120 ಕೆಜಿಯಷ್ಟು ವಿಶೇಷ ರೇಷನ್ ಅಗತ್ಯವಿದ್ದು, ಇದರ ಜೊತೆಗೆ ಭತ್ತದ ಹುಲ್ಲಿನೊಂದಿಗೆ ಭತ್ತ, ಹಿಂಡಿ, ತೆಂಗಿನಕಾಯಿ, ಬೆಲ್ಲವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ.


ಈ ನಡುವೆ 20 ವರ್ಷದ ಲಕ್ಷ್ಮಿ ಮತ್ತು ಧನಂಜಯ ಆನೆಗಳ ನಡುವಿನ ಪ್ರೀತಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಮನೆಯಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿರುವ ಲಕ್ಷ್ಮಿ ಮತ್ತು ಧನಂಜಯ ಆನೆಗಳ ನಡುವೆ ಪ್ರೀತಿ ಹೆಚ್ಚಾಗಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಕ್ಷ್ಮಿ ಆನೆಯ ಪಕ್ಕದಲ್ಲೇ ನಿಂತು, ಧನಂಜಯ ಆನೆ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಪ್ರಾಣಿಗಳ ನಡುವೆಯೂ ಪ್ರೀತಿ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಅಭಿಮನ್ಯು ನೇತೃತ್ವದ ಗಜಪಡೆಗೆ ದಿನಕ್ಕೆ 2 ಬಾರಿ ತಾಲೀಮು ನಡೆಸಲಾಗುತ್ತಿದೆ.   ಪ್ರತಿನಿತ್ಯ 2-3 ಬಾರಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಲಾಗುತ್ತಿದೆ. ಮೊದಲು ಅಭಿಮನ್ಯುವಿಗೆ ಸ್ನಾನ, ನಂತರದಲ್ಲಿ ಧನಂಜಯ ಗೋಪಾಲಸ್ವಾಮಿ, ಅಶ್ವತ್ಥಾಮ, ಲಕ್ಷ್ಮಿ, ಚೈತ್ರ, ವಿಕ್ರಮ, ಕಾವೇರಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಬಿಸಿಲು ಹೆಚ್ಚಿರುವುದರಿಂದ ಆನೆಗಳಿಗೆ ದಿನಕ್ಕೆ 2 ರಿಂದ 3 ಬಾರಿ ಸ್ನಾನ ಮಾಡಿಸಲಾಗುತ್ತಿದೆ.

About Author

Leave a Reply

Your email address will not be published. Required fields are marked *