ಖಾಸಗಿ ದರ್ಬಾರ್ ಹಿನ್ನೆಲೆ: ಅರಮನೆಯಲ್ಲಿ ಸಿಂಹಾಸನ ಜೋಡಣೆ

1 min read

ಮೈಸೂರು,ಅ.1-ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಕಲ ತಯಾರಿ ಭರದಿಂದ ಸಾಗಿದೆ. ಈ ನಡುವೆ ಖಾಸಗಿ ದರ್ಬಾರ್ ಗೆ ಇಂದು ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು.
ಶುಭ ಶುಕ್ರವಾರದ ಭಾದ್ರಪದ ಮಾಸದ ಕೃಷ್ಣ ಪಕ್ಷ. ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಿಗ್ಗೆ 9.15 ರಿಂದ 9.30 ರವರೆಗಿನ ಸಮಯದಲ್ಲಿ ಅರಮನೆಯ ದರ್ಬಾರ್ ಹಾಲ್ ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣೆ ಮಾಡಲಾಯಿತು.


ಅ.7 ರಿಂದ ಖಾಸಗಿ ದರ್ಬಾರ್ ಆರಂಭವಾಗಲಿದ್ದು, ಅಂದು ಈ ರತ್ನ ಖಚಿತ ಸಿಂಹಾಸನಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ಪ್ರತಿದಿನ ಖಾಸಗಿ ದರ್ಬಾರ್ ನಡೆಸುತ್ತಾರೆ.
ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಮೈಸೂರಿನ ಗೆಜ್ಜಹಳ್ಳಿ ಗ್ರಾಮಸ್ಥರಿಂದ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಇಂದು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈ ಬಾರಿಯ ಖಾಸಗಿ ದರ್ಬಾರ್ ಗೆ ಪ್ರವಾಸಿಗರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದ್ದು, ಕೇವಲ ರಾಜಮನೆತನದವರು ಮಾತ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದಾರೆ.
ರತ್ನಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ ಗೆ ತರುವ ಮುನ್ನ ಅರಮನೆಯ ಸ್ಟ್ರಾಂಗ್ ರೂಂನಲ್ಲಿ ಬಿಡಿ ಬಿಡಿಯಾಗಿ ಇರುವ ಸಿಂಹಾಸನವನ್ನು ತಂದು ಜೋಡಿಸಲಾಗುತ್ತದೆ. ಇದಕ್ಕೂ ಮುನ್ನ ಬೆಳಿಗ್ಗೆ ಅರಮನೆಯೊಳಗೆ ಪೂಜಾ ಕೈಂಕರ್ಯಗಳು, ಹೋಮ ಹವನಗಳನ್ನು ರಾಜಮನೆತನದ ರಾಜ ಪುರೋಹಿತರು ನೆರವೇರಿಸಿ ಶಾಂತಿ ಹೋಮ ಮಾಡುತ್ತಾರೆ. ಆ ನಂತರ ಸಿಂಹಾಸನ ಜೋಡಣೆ ಆಗುತ್ತದೆ.
ಅ.1 ರಿಂದ 31 ರವರೆಗೆ ದರ್ಬಾರ್ ಹಾಲ್ ನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ಅ.31 ರಂದು ವಿಸರ್ಜನೆ ಮಾಡಲಾಗುತ್ತದೆ.

About Author

Leave a Reply

Your email address will not be published. Required fields are marked *