ಅನುದಾನ ಸದ್ಭಳಿಕೆ ಆದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ದಿ ಸಾಧ್ಯ: ಜಿಟಿ.ದೇವೇಗೌಡ
1 min readಬೆಳಗಾವಿ: ಉತ್ತರ ಕರ್ನಾಟಕಕ್ಕೆ ಹಂಚಿಕೆಯಾದ ಅನುದಾನ ಸದ್ಭಳಿಕೆ ಆದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ ಟಿ ದೇವೇಗೌಡರು ಅಭಿಪ್ರಾಯ ಪಟ್ಟರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತಾಡಿದ ಜಿ ಟಿ ದೇವೇಗೌಡರು ಉತ್ತರ ಕರ್ನಾಟಕ ಐತಿಹಾಸಿಕವಾಗಿ ಹಿಂದೆ ಉಳಿದಿದೆ. ಇದಕ್ಕೆ ಇಂದಿನ ಸರ್ಕಾರಗಳು ಕಾರಣವಲ್ಲ. ಹಿಂದಿನಿಂದ ಬಂದಿರತಕ್ಕಂತಹ ಸರ್ಕಾರಗಳೆಲ್ಲವೂ ಕೂಡ ಉದಾಸೀನ ಭಾವನೆಯಿಂದ ಇದು ಹಿಂದುಳಿಯುವುದಕ್ಕೆ ಕಾರಣವಾಗಿದೆ. ಅದೂ ಕೂಡ ಹೈದ್ರಾಬಾದ್-ಕರ್ನಾಟಕ, ಕಲ್ಯಾಣ ಕರ್ನಾಟಕ ಅತಿ ಹಿಂದುಳಿದ ಪ್ರದೇಶವಾಗಿದೆ.
1956ರಲ್ಲಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಹಿಂದುಳಿರುವುದನ್ನು ಮನಗಂಡು ಜಸ್ಟೀಸ್ ಫಜಲ್ ಅಲಿ ಕಮಿಷನ್ ನೇಮಕ ಮಾಡಿ 3 ಜನ ನ್ಯಾಯಾಧೀಶರ ನೇತೃತ್ವದಲ್ಲಿ ಕಮಿಷನ್ ರಚನೆಯಾಗುತ್ತದೆ. ಸುಮಾರು 68 ವರ್ಷಗಳು ಆಗಿದೆ. ಅವತ್ತಿನಿಂದಲೂ ಕೂಡ ಈ ಕಮಿಷನ್ ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನ ಸಮಾನತೆಗೋಸ್ಕರ ವಿಶೇಷವಾದಂತಹ ಬಡ್ಜೆಟ್‌ನ್ನು ಕೊಡಬೇಕೆಂದು ಹೇಳಿ ನಿರ್ದೇಶನ ಕೂಡ ಕೊಟ್ಟಿರುತ್ತಾರೆ ಆದರೆ ಇದುವರೆವಿಗೂ ಜಾರಿಗೆ ಬರದೆ ಇರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು..2002 ರಲ್ಲಿ ನಂಜುಂಡಪ್ಪ ವರದಿ ಜಾರಿಗೆ ಬಂದಿದೆ. ಇದು ಜಾರಿಗೆ ಬಂದು 22 ವರ್ಷಗಳು ಆಗಿವೆ. ನಂಜುಂಡಪ್ಪ ವರದಿಗೆ ಅನುಗುಣವಾಗಿ 18 ಹಿಂದುಳಿದ ಜಿಲ್ಲೆಗಳಾಗಿವೆ.
ಪ್ರತಿ ವರ್ಷ 2000 ಕೋಟಿ ರೂ.ಗಳು ಬಡ್ಜೆಟ್‌ನಲ್ಲಿ ತೆಗೆದಿರಿಸಬೇಕು ಅದಕ್ಕೋಸ್ಕರ ಖರ್ಚು ಆಗಬೇಕು, ಅಭಿವೃದ್ಧಿಯಾಗಬೇಕೆಂದು ತಮ್ಮೆಲ್ಲರಿಗೂ ಕೂಡ ಗೊತ್ತಿರುವ ವಿಷಯ. ಕಳೆದ 22 ವರ್ಷಗಳಿಂದ 18 ಜಿಲ್ಲೆಗಳಲ್ಲಿ ಯಾವ ರೀತಿ ಅಭಿವೃದ್ಧಿಯಾಗಿದೆ, ಹಣ ಎಷ್ಟು ಬಿಡುಗಡೆಯಾಗಿದೆ, ಯಾವ ರೀತಿ ಖರ್ಚಾಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗುತ್ತಿಲ್ಲ. ಆದ್ದರಿಂದ ಇದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಬೇಕು, ವರದಿಯನ್ನು ಕೊಡಬೇಕು, ಇದರಿಂದ ಎಷ್ಟು ತಾಲ್ಲೂಕುಗಳು ಅಭಿವೃದ್ಧಿಯಾಗಿವೆ, ಇನ್ನೂ ಯಾವ ಕಾರಣಕ್ಕಾಗಿ ಹಿಂದೆ ಉಳಿದಿವೆ, ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸುವ ಕೆಲಸವಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.. ಅದೇ ರೀತಿ ಹೈದ್ರಾಬಾದ್ ಕರ್ನಾಟಕ ಕೂಡ 5000 ಕೋಟಿ ರೂ.ಗಳನ್ನು ಕೊಡುವುದಾಗಿ ಘೋಷಣೆ ಮಾಡಿದರು. ಈ ವರ್ಷ ಅನುದಾನ ಬಳಕೆಯಾಗದ್ದಿದ್ದರೆ, ಅದು ಮುಂದಿನ ವರ್ಷಕ್ಕೂ ಬಳಕೆಯಾಗಬೇಕು ಎಂದು ಇದ್ದರೂ ಅದೂ ಕೂಡ ಸರಿಯಾಗಿ ಆಗುತ್ತಿಲ್ಲ, ಈ ಬಗ್ಗೆ ಕೂಡ ಬೆಳಕು ಚೆಲ್ಲಬೇಕು ತಿಳಿಸಿದರು.
ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರ 371 J ನ್ನು ಜಾರಿಗೆ ತಂದು ವಿಶೇಷ ಸ್ಥಾನಮಾನವನ್ನು ಕೂಡ ಕೊಟ್ಟಿದೆ. ಆದರೆ 371 J ಕಾಗದದ ಮೇಲೆ ಮಾತ್ರ ಜಾರಿ ಆಗಿದೆ. ಅದು ಅಲ್ಪ-ಸ್ವಲ್ಪ ಅಭಿವೃದ್ಧಿಯಾಗಿದೆ. ಬಿಟ್ಟರೆ ಇನ್ನೂ ವಿಶೇಷವಾದಂತಹ ಅಭಿವೃದ್ಧಿ ಅಥವಾ ಅನುದಾನ ಬಿಡುಗಡೆಯಾಗಿಲ್ಲ, ಪ್ರತ್ಯೇಕವಾದಂತಹ ಬಡ್ಜೆಟ್ ಮಾಡಬೇಕು, ಆದರೆ ವಿಶೇಷ ಅನುದಾನ ಮಾತ್ರ ಕೊಡುತ್ತಿದೆ. ಆದರೆ ಖರ್ಚು ಆಗುತ್ತಿಲ್ಲ, ಯಾಕೆ ಖರ್ಚು ಆಗುತ್ತಿಲ್ಲ, ಯಾಕೆ ಅಭಿವೃದ್ಧಿಯಾಗುತ್ತಿಲ್ಲ ಎಂಬುದರ ಬಗ್ಗೆ ಮಾಹಿತಿ ಕೊಡಬೇಕು. ಇದರ ಬಗ್ಗೆ ಜಾಗ್ರತೆ ವಹಿಸಬೇಕೆಂದು ಎಂದು ಸರ್ಕಾರಕ್ಕೆ ಚಾಟಿ ಬೀಸಿದರು. ಅದರಲ್ಲೂ ಕೂಡ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅಂದಾಜು ಸುಮಾರು 45000 ಗ್ರೂಪ್-‘ಸಿ’ ಮತ್ತು ‘ಡಿ’ ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡಿದರೆ ಅಲ್ಲಿ ಯುವಕರಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಗುತ್ತದೆ ಎಂದು ಸಲಹೆ ನೀಡಿದರು..
ಮಹಾದಾಯಿ ಡ್ಯಾಂನಿಂದ ಕುಡಿಯುವ ನೀರಿನ ಬಹಳಷ್ಟು ಸಮಸ್ಯೆಗಳ ಪರಿಹಾರ ಆಗದೆ ಇರುವುದರಿಂದ ಅದನ್ನು ಕೂಡಲೇ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು..
ನಿಜಲಿಂಗಪ್ಪರವರ ಅವಧಿಯಲ್ಲಿ ಏನು ಕೃಷ್ಣ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಮಾಡಿ ಪ್ರಾರಂಭಗೊಂಡು ಇವತ್ತಿಗೆ ಸುಮಾರು 65-70 ವರ್ಷಗಳು ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆಲಮಟ್ಟಿ ಜಲಾಶಯದ ಮಟ್ಟವನ್ನು 524 ಅಡಿ ನೀರು ತುಂಬಬೇಕೆಂದು ಹೇಳಿ ಹಿಂದೆ ಬಾಗಲಕೋಟೆ ಜಿಲ್ಲೆಯ ರೈತರ ಜಮೀನುಗಳು ಮುಳುಗಡೆ ಯಾಗಿದ್ದು, ಇದುವರೆವಿಗೂ ಭೂ ಪರಿಹಾರ ಕೊಟ್ಟಿಲ್ಲ ಎಂಬುದನ್ನು ನೋಡದೆ ಪರಿಹಾರ ಇಷ್ಟು ಜಾಸ್ತಿ ಆಗುತ್ತಿರಲಿಲ್ಲ. ಹಿಂದಿನ ಸರ್ಕಾರಗಳು ಆವಾಗ್ಲೆ ಪರಿಹಾರ ಕೊಟ್ಟು ಡ್ಯಾಂನ್ನು ವಶಕ್ಕೆ ಪಡೆದು 524 ಅಡಿ ನೀರನ್ನು ನಿಲ್ಲಿಸುವಂತಹ ಕೆಲಸ ಮಾಡಿ ಅದರ ಕೆಳಗೆ ಇರುವಂತಹ ಏತ ನೀರಾವರಿಗಳಿಗೆ ನೀರನ್ನು ಒದಗಿಸುವ ಮೂಲಕ ಈ ಭಾಗದಲ್ಲಿ ಫಲವತ್ತಾದ ಭೂಮಿ ಇದ್ದು, ದುಡಿಯುತಕ್ಕಂತಹ ರೈತರಿಗೆ ಸಹಾಯ ಮಾಡಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು.. ಉತ್ತರ ಕರ್ನಾಟಕದ ರೈತರು ಕಷ್ಟಪಡುವವರು ಈ ಭಾಗದಲ್ಲಿ ಕೃಷಿ, ಕಬ್ಬು, ಹತ್ತಿ ಇರಬಹುದು ಬೇರೆ ಬೇರೆ ಬೆಳೆಗಳನ್ನು ಬೆಳೆಯತಕ್ಕಂತಹ ದುಡಿಯತಕ್ಕಂತಹ ರೈತರು ಇದ್ದಾರೆ, ಕೃಷಿಗೆ ಹೆಚ್ಚು ಒತ್ತು ಕೊಡಬೇಕೆಂದು, ನೀರಾವರಿಗೆ ಹೆಚ್ಚು ಆದ್ಯತೆ ಕೊಡಬೇಕೆಂದು ಒತ್ತಾಯಿಸಿದರು.
ನಾನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ನಂಜುಂಡಪ್ಪ ವರದಿಯನ್ನು ಓದುವ ಸಂದರ್ಭದಲ್ಲಿ, ಇಲ್ಲಿ ಒಂದು ಕೋ-ಆಪರೇಟಿವ್ ಟ್ರೈನಿಂಗ್ ಸೆಂಟರ್ ಆಗಬೇಕೆಂದು ಹೇಳಿ ನಂಜುಂಡಪ್ಪ ವರದಿಯಲ್ಲಿತ್ತು. ಇದನ್ನು ಸರ್ಕಾರ ಮಾಡಬೇಕೆಂದಿತ್ತು. ಆದರೆ, ಮಹಾಮಂಡಳದ ವತಿಯಿಂದಲೇ 10 ಕೋಟಿ ರೂ.ಗಳು ಖರ್ಚು ಮಾಡಿ ಬೆಳಗಾವಿಯಲ್ಲಿ ಒಂದು ಕೋ-ಆಪರೇಟಿವ್ ಟ್ರೈನಿಂಗ್ ಸೆಂಟರ್‌ನ್ನು ಕಟ್ಟಿಸಲಾಗಿದೆ. ಅದರಲ್ಲಿ ಯೂನಿಯನ್ ಬಿಲ್ಡಿಂಗ್ ಕೂಡ ಕಟ್ಟಿಸಲಾಗಿದೆ. ಅಲ್ಲಿ ಸಹಕಾರ ಶಿಕ್ಷಣ, ಪ್ರಚಾರ, ತರಬೇತಿ ಕೂಡ ಮಹಾಮಂಡಳದ ವತಿಯಿಂದ ನಂಜುಂಡಪ್ಪ ವರದಿಯಲ್ಲಿ ಇದ್ದಂತಹ ಒಂದು ಯೋಜನೆಯನ್ನು ಜಾರಿಗೆ ತಂದ ಖುಷಿ ನನಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು..