ಕೆ.ಆರ್.ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ ಶಂಕೆ: ಆಸ್ಪತ್ರೆ ವಾರ್ಡ್ ನಲ್ಲೇ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪ
1 min readಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆ ವಾರ್ಡ್ ನಲ್ಲೇ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ.
30 ವರ್ಷದ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಒಳ ನುಗ್ಗಿ ಅತ್ಯಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ವೇಳೆ ಕಿಟಕಿ ಮೂಲಕ ನುಗ್ಗಿ ಕಾಮುಕ ಅತ್ಯಾಚಾರ ಎಸಗುತ್ತಿದ್ದ. ಅತ್ಯಾಚಾರದ ಬಗ್ಗೆ ವೃದ್ಧೆ ಮಾಹಿತಿ ನೀಡಿದರೂ ವೈದ್ಯರು ಕ್ರಮ ಕೈಗೊಂಡಿಲ್ಲ. ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರಾ ಕೆ.ಆರ್.ಆಸ್ಪತ್ರೆ ವೈದ್ಯರು ಎಂಬ ಅನುಮಾನ ಮೂಡಿದೆ.
ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಅದೇ ವಾರ್ಡ್ ನ ವೃದ್ದೆಯಿಂದ ಸತ್ಯ ಬಯಲಾಗಿದೆ. ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ವೃದ್ಧೆ ಮಾಹಿತಿ ನೀಡಿದ್ದು, ಮಾಹಿತಿ ನೀಡಿದ ವೃದ್ಧೆಗೆ ಹಲ್ಲೆ ಮಾಡಿ ಬಾಯಿ ಬಿಡದಂತೆ ಆಸ್ಪತ್ರೆ ಸಿಬ್ಬಂದಿಯಿಂದ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಗಳತೆ ದೂರದಲ್ಲಿ ದೇವರಾಜ ಪೊಲೀಸ್ ಠಾಣೆ ಇದೆ. ಮಾನವ ಹಕ್ಕುಗಳ ಸೇವಾ ಸಮಿತಿ ನೀಡಿದ ಮಾಹಿತಿಯಿಂದ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ವಿಷಯ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಪರಾರಿಯಾಗಿದ್ದಾರೆ. ಪೊಲೀಸರು ಬಂದರೂ ವೈದ್ಯರು ಸ್ಥಳಕ್ಕೆ ಬಂದಿಲ್ಲ. ಇನ್ನು ಜಾಗ ನರ್ಸ್ ಗಳು ಖಾಲಿ ಮಾಡಿದ್ದಾರೆ. ಅಮಾನವೀಯ ಕೃತ್ಯ ಕೇಳಿ ನೆರೆ ಹೊರೆ ವಾರ್ಡ್ ನ ರೋಗಿಗಳ ಪೋಷಕರು ಬೆಚ್ಚಿ ಬಿದ್ದಿದ್ದಾರೆ.