ಮಳೆಯಿಂದ ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಾ.ಕೆ ವಿ ರಾಜೇಂದ್ರ
1 min readಮೈಸೂರು: ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ರೀತಿ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾಕ್ಟರ್ ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮುಂಗಾರು ಮಳೆಯಾಗುತ್ತಿರುವ ನಿಟ್ಟಿನಲ್ಲಿ ಜೀವ ಹಾನಿ, ಮಳೆ ಹಾನಿ ಹಾಗೂ ಬೆಳೆಹಾನಿ ಉಂಟಾಗುವ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ವಯನಾಡಲ್ಲಿ ಇಂದಿಗೂ ಹೆಚ್ಚು ಮಳೆಯಾಗುತ್ತಿದ್ದು, ಮೈಸೂರಿನಲ್ಲಿ ಯಾವುದೇ ರೀತಿ ಪರಿಣಾಮ ಬೀರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿವಂತೆ ಹಾಗೂ ತಗ್ಗು ಪ್ರದೇಶಗಳಲ್ಲಿ ಜನರಿಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಾ ಅವಗಡಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಮುನ್ನ ಅಲ್ಲಿನ ಮಳೆ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಿ. ವಿದ್ಯಾರ್ಥಿನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುವಂತೆ ಹಾಗೂ ಆಗ್ಗಾಗ್ಗೆ ನೀರಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ಹಾಸ್ಟೆಲ್ ವಾರ್ಡನ್ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಕೆಎಮ್ ಗಾಯತ್ರಿ, ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.