ದಸರಾ ದೀಪಾಲಂಕಾರದ ಅಂದ ಹೆಚ್ಚಿಸಿ: ಸೆಸ್ಕ್ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ

1 min read

ಮೈಸೂರು: ನಾಡಹಬ್ಬ ದಸರೆ ನಮ್ಮ ಹಬ್ಬ, ನಮ್ಮ ಮನೆಯ ಹಬ್ಬವೆಂಬ ಮನಸ್ಥಿತಿಯೊಂದಿಗೆ ದೀಪಾಲಂಕಾರ ಮಾಡಿ ದಸರಾ ಉತ್ಸವದ ಅಂದ ಹೆಚ್ಚಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್)ದ ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಹೇಳಿದ್ದಾರೆ.

ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. “ಈ ಬಾರಿ ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರ 21 ದಿನಗಳಿರುತ್ತವೆ. ಹೀಗಾಗಿ ಹೆಚ್ಚು ಮುತುವರ್ಜಿಯಿಂದ ಇದನ್ನು ನಿರ್ವಹಿಸಬೇಕಿದೆ”, ಎಂದರು.

“ದಸರಾ ಆಚರಣೆ ಮತ್ತು ದೀಪಾಲಂಕಾರ ನಮ್ಮ ಬದ್ಧತೆ ಎಂಬ ಮನಸ್ಥಿತಿಯೊಂದಿಗೆ ಎಲ್ಲರೂ ಒಂದಾಗಿ ಆಚರಣೆ ಮಾಡಬೇಕಿದೆ. ಹೀಗಾಗಿ ಇದೇ ಮನಸ್ಥಿತಿಯೊಂದಿಗೆ ದಸರಾ ವಿದ್ಯುತ್‌ ದೀಪಾಲಂಕಾರ ಮಾಡುವ ಮೂಲಕ ಅದರ ಅಂದ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಎಲ್ಲರೂ ಒಂದಾಗಿ ದಸರಾ ಆಚರಿಸೋಣ. ಗುತ್ತಿಗೆದಾರರ ಯಾವುದೇ ಸಮಸ್ಯೆಗಳಿದ್ದರೂ ಎಲ್ಲವನ್ನೂ ಬಗೆಹರಿಸುವುದಾಗಿ”, ಭರವಸೆ ನೀಡಿದರು.

“ಈ ಬಾರಿಯ ದಸರಾ ಮಹೋತ್ಸವದಲ್ಲಿ 21 ದಿನಗಳವರೆಗೂ ವಿದ್ಯುತ್‌ ದೀಪಾಲಂಕಾರ ಇರಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಆರಂಭದಿಂದ ಕೊನೆವರೆಗೂ ದೀಪಾಲಂಕಾರದ ಅಂದ ಉಳಿಯುವಂತೆ ನೋಡಿಕೊಳ್ಳಬೇಕಿದೆ. ಅಲ್ಲದೇ, ಬಹುತೇಕರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿದ ನಂತರದಲ್ಲಿ ದೀಪಾಲಂಕಾರ ವೀಕ್ಷಣೆಗಾಗಿ ಬರುತ್ತಾರೆ. ಹೀಗಾಗಿ ಕಡೆಯ 8-10 ದಿನಗಳು ದೀಪಾಲಂಕಾರ ನಿರ್ವಹಣೆ ಮಾಡುವುದು ಸವಾಲಾಗಲಿದೆ”, ಎಂದರು.

ಸೆಸ್ಕ್‌ ತಾಂತ್ರಿಕ ನಿರ್ದೇಶಕರಾದ ಮುನಿಗೋಪಾಲ್‌ ರಾಜು ಅವರು ಮಾತನಾಡಿ, “ಕಳೆದ ನಾಲ್ಕೈದು ವರ್ಷಗಳಲ್ಲಿ ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಾಗಿದೆ. ಆದ್ದರಿಂದ ಈ ಬಾರಿ ದೀಪಾಲಂಕಾರಕ್ಕೆ ವಿಶೇಷ ಮೆರಗು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ನಿರೀಕ್ಷೆ ಸಹ ಹೆಚ್ಚಿದೆ. ದೀಪಾಲಂಕಾರದಲ್ಲಿ ಹೊಸತನದ ಜತೆಗೆ ಗುಣಮಟ್ಟ, ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಆದ್ದರಿಂದ ಗುಣಮಟ್ಟದ ದೀಪಗಳನ್ನು ಬಳಸುವ ಹಾಗೂ ಉತ್ತಮ ಕೆಲಸ ಮಾಡುವ ಅಗತ್ಯವಿದೆ. 21 ದಿನಗಳವರೆಗೂ ದೀಪಾಲಂಕಾರದ ಸರಿಯಾದ ನಿರ್ವಹಣೆ ನಿರ್ವಹಣೆ ಮಾಡಬೇಕಿದ್ದು, ದಸರಾ ಆರಂಭದ 3-4 ದಿನಗಳ ಮೊದಲೇ ಪರಿಪೂರ್ಣವಾದ ಲೈಟಿಂಗ್‌ ಮಾಡಿ, ಟ್ರಯಲ್‌ ನೀಡಬೇಕಿದೆ”, ಎಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಮಾತನಾಡಿದ ವಿದ್ಯುತ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ತಮ್ಮ ಕೆಲವೊಂದು ಬೇಡಿಕೆಗಳನ್ನು ಸಭೆಯಲ್ಲಿ ಚರ್ಚೆ ನಡೆಸಿ ಈ ಬಾರಿ ಸಮಸ್ಯೆ ಆಗದಂತೆ ಕ್ರಮವಹಿಸಬೇಕೆಂದು ಕೋರಿದರು.

ಸಭೆಯಲ್ಲಿ ವಿದ್ಯುತ್‌ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್‌.ರಮೇಶ್‌, ಸೆಸ್ಕ್‌ ಅಧೀಕ್ಷಕ ಇಂಜಿನಿಯರ್‌ ಸುನೀಲ್‌ ಕುಮಾರ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇದ್ದರು.

ದಸರಾ ದೀಪಾಲಂಕಾರ ವಿಜೃಂಭಣೆಯಿಂದ ಆಗಲು ಗುತ್ತಿಗೆದಾರರ ಪಾತ್ರ ಮುಖ್ಯವಾಗಿದೆ. ಈ ಬಾರಿ ವಿಭಿನ್ನ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆದಿದೆ. 21 ದಿನಗಳವರೆಗೂ ದೀಪಾಲಂಕಾರ ಉಳಿಯುವಂತೆ ಮಾಡುವ ಜತೆಗೆ ಗುಣಮಟ್ಟ ಮತ್ತು ಸುರಕ್ಷತೆಗೂ ಆದ್ಯತೆ ನೀಡಬೇಕಿದೆ.
* ಜಿ. ಶೀಲಾ, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್‌

About Author

Leave a Reply

Your email address will not be published. Required fields are marked *