ಹಿಂದೂ ಧರ್ಮವನ್ನು ಪ್ರತಾಪ್ ಸಿಂಹ ಗುತ್ತಿಗೆ ಪಡೆದಿದ್ದಾರೆಯೇ?: ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್
1 min readಮೈಸೂರು,ಸೆ.18-ಹಿಂದೂ ಧರ್ಮವನ್ನು ಸಂಸದ ಪ್ರತಾಪ್ ಸಿಂಹ ಗುತ್ತಿಗೆ ಪಡೆದಿದ್ದಾರೆಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವಾಲಯ ತೆರವುಗೊಳಿಸಲು ಸರ್ಕಾರವೇ ಆದೇಶ ನೀಡಿ ಈಗ ಆರೋಪವನ್ನು ಅಧಿಕಾರಗಳ ಮೇಲೆ ಹಾಕುತ್ತಿದೆ. ಹಿಂದೂ ಧರ್ಮ ಬಿಜೆಪಿಯವರ ಸ್ವತ್ತಲ್ಲ. ಎಲ್ಲರಿಗೂ ಸೇರಿದ್ದು, ಧರ್ಮಾಧಾರಿತ ರಾಜಕೀಯ ಮಾಡುವುದು ಬಿಟ್ಟು, ಜಾತ್ಯಾತೀತ ರಾಜಕಾರಣ ಮಾಡುವುದು ಕಲಿಯಿರಿ ಎಂದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಮಾಡುವ ಆದೇಶವನ್ನು ಪಾಲನೆ ಮಾಡಲು ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಅನುಮತಿ ತೆಗೆದುಕೊಂಡು ಆದೇಶ ಹೊರಡಿಲಸಲಾಗುತ್ತದೆ. ಮುಖ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರ ಲೋಪ ಎಸಗಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಆದೇಶ ನೀಡುವ ಮೊದಲೆ ಸಾಧಕ ಬಾಧಕಗಳನ್ನು ಚರ್ಚೆ ಮಾಡಬೇಕಿತ್ತು ಎಂದರು.
ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಾವಶ್ಯಕವಾಗಿ ಲಘುವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ದೇವಾಲಯ ಒಡೆದದ್ದು ತಪ್ಪು ಎಂದು ಹೇಳಿದ್ದಾರೆ. ಆದರೆ ಪ್ರತಾಪ್ ಸಿಂಹ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಿದ್ದೇವೆ ಎಂಬಂತೆ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಇದನ್ನು ಖಂಡಿಸುತ್ತೇವೆ. ಧರ್ಮಾಧಾರಿತ ರಾಜಕೀಯ ಸಿದ್ದರಾಮಯ್ಯ ಮಾಡಿಲ್ಲ.ಸಿದ್ದರಾಮಯ್ಯ ಅವರ ಕಾಲದಲ್ಲಿ ದೇವಾಲಯ ನೆಲಸಮ ಮಾಡುವ ಕೆಲಸ ಮಾಡಿಲ್ಲ. ಆ ರೀತಿ ನಿದರ್ಶನ ಇದ್ದರೆ ಹೇಳಲಿ ಸವಾಲು ಹಾಕಿದರು.
ಪತ್ರಕರ್ತರ ಮೇಲ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ ಹಿಂದೂ ಜಾಗರಣ ವೇದಿಕೆ ಗೂಂಡಾಗಿರಿ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಭಯದ ವಾತಾವರಣ ಮೂಡಿಸಬಾರದು ಒಳ್ಳೆಯ ವಾತಾವರಣ ಇರಬೇಕೆಂದರು.
ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ರಾಜ್ಯಕ್ಕೆ ಮಾರಕ: ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ರಾಜ್ಯಕ್ಕೆ ಮಾರಕವಾಗಿದೆ. ಪ್ರಾಚೀನತೆಯತ್ತ ಮುಖ ಮಾಡುತ್ತಿರುವ ಹಾಗೂ ಹಿಮ್ಮುಖ ಚಲನೆಯ ರಾಷ್ಟ್ರೀಯ ನೀತಿಯಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 1968 ರಲ್ಲಿ ಇಂದಿರಾಗಾಂಧಿ ಅವರು, ಹಾಗೂ 1986 ರಲ್ಲಿ ರಾಜೀವ್ ಗಾಂಧಿಯವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ಜಾರಿಗೊಳಿಸಿದ ಸಂದರ್ಭದಲ್ಲಿ ಸದನದಲ್ಲಿ, ಲೋಕಸಭೆ, ರಾಜ್ಯ ಸಭೆಯಲ್ಲಿ, ವಿಧಾನಸಭೆ, ರಾಜ್ಯ ಸಭೆಗಳಲ್ಲಿ ವ್ಯಾಪಕವಾದ ಚರ್ಚೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮರಸ್ಯದಿಂದ ಅಂದಿನ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ.
ಆದರೆ ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪಾರ್ಲಿಮೆಂಟ್, ಸದನದಲ್ಲಿ ಕೂಡ ಚರ್ಚೆಯಾಗಿಲ್ಲ. ಆದರೆ ಇದನ್ನು ಕೂಡಲೇ ಜಾರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ಹಿನ್ನಡೆ ಉಂಟಾಗುತ್ತದೆ. ವಿಶೇಷವಾಗಿ ಸಂವಿಧಾನದ ಪರಿಚ್ಛೇದ 7ರಲ್ಲಿ ಶಿಕ್ಷಣದ ಕಾನೂನುಗಳನ್ನು ರೂಪಿಸುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಚರ್ಚಿಸಿ ಒಮ್ಮತದ ಮೇರೆಗೆ ನೀತಿ ರೂಪಿಸಬೇಕಾಗುತ್ತದೆ. ಆದರೆ ಸದನದಲ್ಲಿ ಚರ್ಚೆಯಾಗದೆ ದೇಶದಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಬೇಕೆಂಬ ಉದ್ದೇಶ ಇಟ್ಟುಕೊಂಡು ಜಾರಿಗೆ ತರುವ ಪ್ರಯತ್ನ ಈಗಾಗಲೇ ಮಾಡುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಸಂವಿಧಾನ ಮತ್ತು ಸರ್ಕಾರದ ಆದ್ಯ ಕರ್ತವ್ಯಗಳನ್ನು ಸಾಧಿಸುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಂಡು ಶಿಕ್ಷಣ ನೀತಿಯನ್ನು ರೂಪಿಸಬೇಕಾಗಿತ್ತು. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ನಮ್ಮ ಜಿಡಿಪಿ ಶೇ.6 ರಷ್ಟು ಹಣವನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ ಇಡಬೇಕಾಗಿತ್ತು. ಆ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಹಾಗಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಿಕ್ಷಕರ ಸಮಸ್ಯೆ, ಬಹಳಷ್ಟು ಕಡೆ ಶಿಕ್ಷಕರ ಪೋಸ್ಟ್ ಖಾಲಿ ಇದೆ. ಮೊದಲು ಶಾಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕು ಎಂದರು.
ಸದರಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಚಿತ , ಗುಣಮಟ್ಟದ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾವನೆಗಳಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ವಿದ್ಯಾರ್ಥಿಗಳ ನಡುವಿನ ಕಲಿಕೆ ಅಂತರಕ್ಕೆ ಪರಿಹಾರ ಸೂಚಿಸಿಲ್ಲ. ಶಾಲೆ ಬಿಡುವವರ ಸಂಖ್ಯೆಗೆ ಪರಿಹಾರ ಸೂಚಿಸಿಲ್ಲ. ಡಿಗ್ರಿ ಓದುವವರು ಮಧ್ಯದಲ್ಲಿ ಬಿಟ್ಟರೆ ಪ್ರಮಾಣ ಪತ್ರ ನೀಡುತ್ತಾರೆ . ಪದವೀಧರರಾಗುವುದನ್ನು ಮೊಟಕುಗೊಳಿಸುವುದು ಇದರಲ್ಲಿದೆ. ಪ್ರಾಚೀನ ಸಂಸ್ಕೃತಿ, ಸಂಸ್ಕೃತ ಭಾಷಾ ಕಲಿಕೆಗೆ ಅನಗತ್ಯ ಒತ್ತು ನೀಡಿದ್ದಾರೆ. ರ್ಯಾಂಕ್ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಇಲ್ಲಿ ಹಳೆ ಪದ್ಧತಿ ಅನುಸರಿಸಿದರೆ ಶಿಕ್ಷಣ ಹಿಂದಕ್ಕೆ ಹೋಗಲಿದೆ. ಈಗಾಗಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೀಟ್ , ಜೆಇಇ ಪರೀಕ್ಷೆಗಳು ಕಷ್ಟಕರವಾಗಿದೆ. ಅವರಿಗೆ ಗಣಿತ, ಇಂಗ್ಲಿಷ್, ವಿಜ್ಞಾನದ ಉತ್ತಮ ಬೋಧನೆ ಬೇಕಾಗಿದೆ. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಚೀನ ಮತ್ತ ಪುರಾತನ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ್ದು, ಇದು ಪ್ರಗತಿಗೆ ವಿರೋಧವಾಗಲಿದೆ ಎಂದರು.
ವೈಜ್ಞಾನಿಕ ತಳಹದಿಯಲ್ಲಿ ಶಿಕ್ಷಣ ರೂಪುಗೊಳ್ಳಬೇಕು. ಸಂವಿಧಾನದಲ್ಲಿ ಆರ್ಟಿಕಲ್ 28 ರಲ್ಲಿ ಹೇಳಿದೆ. ಸದನದಲ್ಲಿ ಅಥವಾ ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಿಲ್ಲ. ಇಷ್ಟೊಂದು ಆತುರವಾಗಿ ಯಾಕೆ ? ಎಂದು ಪ್ರಶ್ನಿಸಿದ ಅವರು ಶಿಕ್ಷಣ ತಜ್ಞರು, ವಿಚಾರ ಸಂಕಿರಣ ಆಗಬೇಕು, ಚರ್ಚೆಯಾಗಬೇಕು, ಅಹವಾಲುಗಳನ್ನು ಸ್ವೀಕರಿಸಬೇಕು. ಇದೆಲ್ಲವನ್ನೂ ಆಧರಿಸಿ ಶಿಕ್ಷಣ ನೀತಿ ನೀಡಿದರೆ ನಿಜವಾಗಿಯೂ ಬಹಳ ಅನುಕೂಲ ಆಗಲಿದೆ. ಹೊಸ ಶಿಕ್ಷಣ ನೀತಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ ಹಿನ್ನೋಟ ಇರಬಾರದು ಸಮಿತಿಯ ಸದಸ್ಯರ ಬ್ಯಾಕ್ ಗ್ರೌಂಡ್ ಕೂಡ ಚರ್ಚೆ ಮಾಡಬೇಕು ಎಂದರು.
ತಂಬಾಕು ಬೆಳಗಾರರಿಗೆ ಸರಿಯಾದ ಬೆಲೆ ನೀಡಿ:
ಕಳೆದ ಎರಡು ವರ್ಷ ತಂಬಾಕಿಗೆ ಸರಿಯಾದ ದರ ಸಿಗಲಿಲ್ಲ. ಬೆಳೆಗಾರರಿಗೆ ವೆಚ್ಚವೇ ಜಾಸ್ತಿಯಾಗಿದೆ. ತಂಬಾಕು ಖರೀದಿ ಪ್ರಾರಂಭವಾಗುವ ಸಂದರ್ಭ ಇದಾಗಿದೆ. ತಂಬಾಕು ಮಂಡಳಿಗೆ ಸಾಕಷ್ಟು ಹಣ ಬರುತ್ತದೆ. ವಿದೇಶಿ ವಿನಿಮಯ ಹಣ ಬರುತ್ತದೆ. ಜಿಎಸ್ ಟಿ ಶೇ.18 ತಗೋತಾರೆ. 2000 ಕೋಟಿ ಹಣ ಮಂಡಳಿಯಲ್ಲಿ ಇಟ್ಟುಕೊಂಡು ಕೋವಿಡ್ ಸಮಯದಲ್ಲಿ ತಂಬಾಕು ಬೆಳೆಗಾರರಿಗೆ ಯಾವುದೇ ಪರಿಹಾರ ನೀಡಿಲ್ಲ. ಹರಾಜು ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಒಳ್ಳೆಯ ಬೆಳೆ ಬಂದಿದ್ದು, ಈ ವರ್ಷವಾದರೂ ಉತ್ತಮವಾದ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.