ಮಾಯಾಂಕ್ ಮಾಯೆಗೆ ನಡುಗಿದ ಶಿವಮೊಗ್ಗ!

1 min read

ಮೈಸೂರು : ನಾಯಕ ಮಯಾಂಕ್‌ ಅಗರ್ವಾಲ್‌ (102*) ಅವರ ಆಕರ್ಷಕ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 9 ವಿಕೆಟ್‌ ಜಯ ಗಳಿಸಿದೆ.

ಮಯಾಂಕ್‌ ಅಗರ್ವಾಲ್‌ 49 ಎಸೆತಗಳನ್ನೆದುರಿಸಿ 10 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಅಜೇಯ 102 ರನ್‌ ಗಳಿಸಿ ಟೂರ್ನಿಯ ಎರಡನೇ ಶತಕ ಗಳಿಸಿದ ಆಟಗಾರರೆನಿಸಿದರು. ನಿನ್ನೆ ಗುಲ್ಬರ್ಗ ಪರ ರೋಹನ್‌ ಪಾಟೀಲ್‌ ಮೊದಲ ಶತಕ ಗಳಿಸಿದ್ದರು. ಇನ್ನೊಂದೆಡೆ ಕೆ.ವಿ. ಅನೀಶ್‌ ಅಜೇಯ 35* ರನ್‌ ಗಳಿಸಿ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್‌ ನೀಡಿದರು.

ಮಯಾಂಕ್‌ ಹಾಗೂ ಅನೀಶ್‌ 107 ರನ್‌ ಜೊತೆಯಾಟ ಆಡುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್‌ ಇನ್ನೂ 20 ಎಸೆತ ಬಾಕಿ ಇರುವಾಗಲೇ ಜಯದ ಗುರಿ ತಲುಪಿತು. 174 ರನ್‌ ಜಯದ ಗುರಿ ಹೊತ್ತ ಬೆಂಗಳೂರು ಬ್ಲಾಸ್ಟರ್ಸ್‌ ಅಬ್ಬರದ ಆರಂಭ ಕಂಡಿತ್ತು. ನಾಯಕ ಮಯಾಂಕ್‌ ಅಗರ್ವಾಲ್‌ ಹಾಗೂ ಎಲ್‌.ಆರ್‌. ಚೇತನ್‌ 5 ಓವರ್‌ಗಳಲ್ಲಿ 69 ರನ್‌ ಗಳಿಸಿ ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದರು. 15 ಎಸೆತಗಳನ್ನೆದುರಿಸಿ 34 ರನ್‌ ಗಳಿಸಿ ಆಡುತ್ತಿದ್ದ ಚೇತನ್‌ ಅವರ ವಿಕೆಟ್‌ ಪಡೆಯವಲ್ಲಿ ದೇವಯ್ಯ ಯಶಸ್ವಿಯಾದರು. ಚೇತನ್‌ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು.

ಶಿವಮೊಗ್ಗ ಸ್ಟ್ರೈಕರ್ಸ್‌ 173:

ಬೆಂಗಳೂರು ಬ್ಲಾಸ್ಟರ್ಸ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು.

ರೋಹನ್‌ ಕದಮ್‌ ಹಾಗೂ ಬಿ.ಆರ್.ಶರತ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 10.1 ಓವರ್‌ಗಳಲ್ಲಿ 83 ರನ್‌ ಗಳಿಸಿರುವಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆ ನಿಂತ ನಂತರ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

  • ಬಿ.ಆರ್‌.ಶರತ್‌ (51) ಮತ್ತು ರೋಹನ್‌ ಕದಮ್‌ (84) 116 ರನ್‌ ಜೊತೆಯಾಟವಾಡಿದರು. ಆದರೆ ಮೊದಲ ಅರ್ಧ ಶತಕ ಗಳಿಸಿದ ಶರತ್‌ ಅವರ ವಿಕೆಟ್‌ ಪಡೆಯುವಲ್ಲಿ ಸಚಿತ್‌ ಯಶಸ್ವಿಯಾದರು. 45 ಎಸೆತಗಳನ್ನೆದುರಿಸಿದ ಶರತ್‌ 5 ಬೌಂಡರಿ ನೆರವಿನಿಂದ 51 ರನ್‌ ಗಳಿಸಿದರು. ಮಳೆ ನಿಂತ ಬಳಿಕ ಬೆಂಗಳೂರು ಬ್ಲಾಸ್ಟರ್ಸ್‌ ಬೌಲಿಂಗ್‌ನಲ್ಲಿ ಯಶಸ್ಸು ಮೇಲುಗೈ ಸಾಧಿಸಿತು. 84 ರನ್‌ ಗಳಿಸಿ ಆಡುತ್ತಿದ್ದ ರೋಹನ್‌ ಕದಮ್‌ ಅಬ್ಬರದ ಹೊಡೆತಗಳಿಗೆ ಮನ ಮಾಡಲು ಯತ್ನಿಸಿದರು. ಆದರೆ ಕುಮಾರ್‌ ಬೌಲಿಂಗ್‌ನಲ್ಲಿ ಬೆಂಗಳೂರು ನಾಯಕ ಮಯಾಂಕ್‌ ಅಗರ್ವಾಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಿನ್ನೆಯ ದಿನ ರೋಹನ್‌ ಪಾಟೀಲ್‌ ಶತಕ ಸಿಡಿಸಿದಂತೆ ಇಂದು ರೋಹನ್‌ ಕದಮ್‌ ಶತಕ ಸಿಡಿಸುತ್ತಾರೆಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಗಳಲ್ಲಿದ್ದಿತ್ತು, ಆದರೆ ಕುಮಾರ್‌ ಅದಕ್ಕೆ ಅವಕಾಶ ನೀಡಲಿಲ್ಲ.

52 ಎಸೆತಗಳನ್ನೆದುರಿಸಿದ ಕದಮ್‌, 8 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಮೂಲ್ಯ 84 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ನಂತರ ನಾಯಕ ಕೆ. ಗೌತಮ್‌ (18) ಹಾಗೂ ಡಿ. ಅವಿನಾಶ್‌ (14) ಎರಡು ಓವರ್‌ಗಳಲ್ಲಿ 25 ರನ್‌ ಜೊತೆಯಾಟವಾಡಿದರು. 19 ಓವರ್‌ಗಳಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ 2 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌:
ಶಿವಮೊಗ್ಗ ಸ್ಟ್ರೈಕರ್ಸ್‌: 19 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 173 ರನ್‌. (ಬಿ,ಆರ್‌. ಶರತ್‌ 51, ರೋಹನ್‌ ಕದಮ್‌ 84, ಕೆ. ಗೌತಮ್‌ 18, ಡಿ .ಅವಿನಾಶ್‌ 13 ಕುಮಾರ್‌ 44ಕ್ಕೆ 1, ಸುಚಿತ್‌ 24ಕ್ಕೆ 1)

ಬೆಂಗಳೂರು ಬ್ಲಾಸ್ಟರ್ಸ್‌: 15.4 ಓವರ್‌ಗಳಲ್ಲಿ 1 ವಿಕೆಟ್‌ಗೆ 176. (ಮಯಾಂಕ್‌ ಅಗರ್ವಾಲ್‌ 102, ಅನೀಶ್‌ 35, ಚೇತನ್‌ 34, ದೇವಯ್ಯ 24ಕ್ಕೆ 1)

About Author

Leave a Reply

Your email address will not be published. Required fields are marked *