ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿಯಾದ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು
1 min readಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ತಮ್ಮ ಅವಧಿಯಲ್ಲಿ ಚಲನಚಿತ್ರೋದ್ಯಮದ ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದು, ಯಾವತ್ತೂ ಚಿತ್ರೋದ್ಯಮವು ತಮ್ಮನ್ನು ಅತ್ಯಂತ ಪೂಜ್ಯ ಸ್ಥಾನದಲ್ಲಿ ಗೌರವಿಸುತ್ತಾ ಬಂದಿರುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಚಲನಚಿತ್ರೋದ್ಯಮದ ಕೆಳಕಂಡ ಬೇಡಿಕೆಗಳನ್ನು ಈಡೇರಿಸಿಕೊಡುವ ಮೂಲಕ ಕನ್ನಡ ಚಿತ್ರರಂಗವು ಉಳಿದು, ಬೆಳೆಯಲು ಸಹಕರಿಸಬೇಕು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಇದೇ ವೇಳೆ ಮಂಡಳಿಯ ಪದಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ, ಸುಂದರ್ ರಾಜ್, ಕುಶಾಲ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಕೆವಿ ಚಂದ್ರಶೇಖರ್ ಉಪಸ್ಥಿತರಿದ್ದರು.
ನಿರ್ಮಾಪಕರು ಚಿತ್ರ ತಯಾರಿಸಿ, ಪಕ್ಕದ ರಾಜ್ಯದದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು, ಇಂದಿಗೂ ನಿರ್ಮಾಪಕರಿಗೆ ಕಷ್ಟಕರವಾಗಿದೆ. ವರ್ಷಕ್ಕೆ ಅಂದಾಜು 350 ಕನ್ನಡ ಚಲನಚಿತ್ರಗಳು ನಿರ್ಮಾಣಗೊಂಡು ಬಿಡುಗಡೆಗೊಳ್ಳುತ್ತಿವೆ. ಆದಕಾರಣ ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯ ವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ’ ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿದೆ.
ರಾಜ್ಯದ ಚಿತ್ರಮಂದಿರಗಳಲ್ಲಿನ ಪ್ರೊಜೆಕ್ಟರ್‌ಗಳು ವಿದೇಶದಿಂದ, ಅದರಲ್ಲೂ ಒಬ್ಬರು ಇಬ್ಬರು. ಸರ್ವೀಸ್ ಪ್ರೊವೈಡರ್‌ನಿಂದ ಪಡೆಯಬೇಕಾಗಿದೆ. ಈ ಕ್ರಮದಿಂದ ಚಿತ್ರಮಂದಿರಗಳು ಇಂದಿಗೂ ಬಾಡಿಗೆ ರೂಪದಲ್ಲಿ ಪಡೆದು ಪ್ರದರ್ಶನ ನಡೆಸುತ್ತಿದ್ದು, ಸ್ವಂತ ಪ್ರೊಜೆಕ್ಟರ್ ಖರೀದಿಸಲು 40-50 ಲಕ್ಷ ರೂ. ಬಂಡವಾಳ ಹೂಡಬೇಕಾಗುತ್ತದೆ. ಈ ರೀತಿಯ ಪ್ರೋತ್ಸಾಹಕ್ಕೆ ತಲಾ ಒಂದು ಪ್ರೊಜೆಕ್ಟರ್ ಖರೀದಿಗೆ 10 ರಿಂದ 15 ಲಕ್ಷ ರೂಪಾಯಿ ಸಹಾಯಧನ ನೀಡಿದರೆ ಪ್ರದರ್ಶಕರು ಸ್ವಾವಲಂಬಿಯಾಗಿ ಉದ್ಯಮವನ್ನು ಬೆಳೆಸಲು ಸಹಾಯವಾಗುತ್ತದೆ. ಆದಕಾರಣ ಪ್ರಾರಂಭಿಕ ಹಂತದಲ್ಲಿ 20 ಕೋಟಿ ರೂಪಾಯಿ ಹಣವನ್ನು ನಿಗದಿಪಡಿಸಿ ಕೊಡಬೇಕಾಗಿ ಕೋರುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ’ ಎಂದು ವಾಣಿಜ್ಯ ಮಂಡಳಿ ಅರ್ಜಿಯಲ್ಲಿ ತಿಳಿಸಿದೆ. ಎಲ್ಲಾ ಸಮಸ್ಯೆಗಳಿಗೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಸ್ಪಂದಿಸಿದ್ದಾರೆ. ಕಲಪ ಮುಗಿದ ಬಳಿಕ ವಾಣಿಜ್ಯ ಚಲನಚಿತ್ರ ಮಂಡಳಿಯಲ್ಲಿಯೇ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.