ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ದಾಖಲೆಯ ಅತೀ ಉದ್ದದ ಮಾನವ ಸರಪಳಿ ರಚನೆ

1 min read

ಬೆಂಗಳೂರು ಗ್ರಾಮಾಂತರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 77 ಕಿ.ಮೀ ಮಾನವ ಸರಪಳಿ ರಚನೆಯಾಗಲಿದ್ದು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಸರಪಳಿಗೆ ಕೈ ಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಕೋರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಮಾನವ ಸರಪಳಿ ರಚನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಏಕಕಾಲಕ್ಕೆ ಎರಡು ಕಡೆಗಳಲ್ಲಿ ಮಾನವ ಸರಪಳಿ ರಚನೆಯಾಗಲಿದೆ. ಮೊದಲ ಭಾಗದಲ್ಲಿ ನೆಲಮಂಗಲ ತಾಲ್ಲೂಕಿನ ಹಳೆ ನಿಜಗಲ್ ನಿಂದ ಮಾನವ ಸರಪಳಿ ಪ್ರಾರಂಭವಾಗಿ ಡಾಬಸ್ ಪೇಟೆಯ ಮುಖಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ಕ್ರಾಸ್ (ನಂದಿ ಬೆಟ್ಟದ ಹತ್ತಿರ) ವರೆಗೆ ಒಟ್ಟು 54 ಕಿಲೋ ಮೀಟರ್ ಮಾನವ ಸರಪಳಿ ರಚನೆಯಾಗಲಿದೆ. 2ನೇ ಭಾಗವಾಗಿ ಹೊಸಕೋಟೆ ತಾಲ್ಲೂಕಿನ ವೆಂಕಟಪುರ ದಿಂದ ಪ್ರಾರಂಭವಾಗಿ ಮುಗಬಾಳ ಮುಖಾಂತರ ಹೊಸಕೋಟೆಯ ದೊಡ್ಡಮಾನಿಕೆರೆಯವರೆಗೆ ಒಟ್ಟು 23 ಕಿಲೋಮೀಟರ್ ಸೇರಿದಂತೆ ಒಟ್ಟು 77 ಕಿಲೋಮೀಟರ್ ವರೆಗೆ ಜಿಲ್ಲೆಯಲ್ಲಿ ಮಾನವ ಸರಪಳಿ ರಚನೆಯಾಗಲಿದೆ.

ಸೆಪ್ಟೆಂಬರ್ 15 ರಂದು ಬೆಳಗ್ಗೆ 9:30 ಗಂಟೆಗೆ ಮಾನವ ಸರಪಳಿ ರಚನೆ ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 10 ಕ್ಕೆ ಮಾನವ ಸರಪಳಿ ಬಿಡುವ ಮುನ್ನ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ, ಬೆಳಗ್ಗೆ 10 ರಿಂದ 10:30 ರವರೆಗೆ ಸಸಿಗಳನ್ನು ನೆಡುವ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಮಾನವ ಸರಪಳಿಯಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ವಿನೂತನ ದಾಖಲೆ ನಿರ್ಮಾಣದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕೋರಿದರು.

ವೇದಿಕೆ ಕಾರ್ಯಕ್ರಮದ ಸ್ಥಳ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ತಾಲ್ಲೂಕು ಮಟ್ಟದ ವೇದಿಕೆ ಕಾರ್ಯಕ್ರಮವು ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆಯಲ್ಲಿ ನಡೆಯಲಿದೆ, ಹೊಸಕೋಟೆ ತಾಲ್ಲೂಕು ವೇದಿಕೆ ಕಾರ್ಯಕ್ರಮವು ತಾವರೆಕೆರೆ ಗ್ರಾಮ ಪಂಚಾಯಿತಿಯ ಬಳಿ ನಡೆಯಲಿದೆ, ದೊಡ್ಡಬಳ್ಳಾಪುರ ತಾಲೂಕಿನ ವೇದಿಕೆ ಕಾರ್ಯಕ್ರಮವು ಐ.ಬಿ ಸರ್ಕಲ್ ಬಳಿ ನಡೆಯಲಿದೆ. ದೇವನಹಳ್ಳಿ ಹಾಗೂ ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮವು ಹೆಗ್ಗಡೆ ಹಳ್ಳಿ ಗ್ರಾಮ ಪಂಚಾಯಿತಿ ಬಳಿ ನಡೆಯಲಿದೆ.

ಜಿಲ್ಲೆಯ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲು ವ್ಯಾಪಕ ಪ್ರಚಾರ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಲು ಕ್ರಮ ವಹಿಸಲಾಗಿದೆ- ಡಾ. ಕೆ.ಎನ್ ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಮಾನವ ಸರಪಳಿ ನಡೆಯುವ ರಸ್ತೆ ಮಾರ್ಗದಲ್ಲಿ ಭದ್ರತಾ ದೃಷ್ಟಿಯಿಂದ ಹಾಗೂ ರಸ್ತೆ ಸುರಕ್ಷತೆಗಾಗಿ 500 ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಗತ್ಯ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ- ಸಿ.ಕೆ ಬಾಬಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾನವ ಸರಪಳಿ ರಚನೆಯ ಹಿನ್ನೋಟ
ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಉದ್ದೇಶದಿಂದ ಕರ್ನಾಟಕ ಸರ್ಕಾರವು, ಸೆಪ್ಟಂಬರ್ 15 ರ ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಅಂದು ರಾಜ್ಯದ ಜನ ಸಾಮಾನ್ಯರೊಂದಿಗೆ ಸೇರಿ ಜಗತ್ತಿನ ಅತಿ ಉದ್ದದ ಮಾನವ ಸರಪಳಿಯು ರಚಿಸುವ ಮಹತ್ವದ ಕಾರ್ಯಕ್ರಮ ರೂಪಿಸಿದೆ.

ರಾಜ್ಯದಲ್ಲಿ ಈ ಮಾನವ ಸರಪಳಿಯು ಸುಮಾರು 2500 ಕಿಲೋಮೀಟರ್ ಉದ್ದ ಇರಲಿದ್ದು ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್‌ಗೆ 1000 ಜನರು ಇರಲಿದ್ದಾರೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.

ಈ ಮಾನವ ಸರಪಳಿಯಲ್ಲಿ ಸ್ವಾತಂತ್ರ‍್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರಿಕಲ್ಪನೆಯನ್ನು ಒತ್ತಿಹೇಳುವ ಪ್ರಜಾಪ್ರಭುತ್ವದ ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಜೊತೆಗೆ ಈ ಸಂದರ್ಭದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸುವವರಿಂದ ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲು ಆಯೋಜಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವಂತಹ ಕಾಳಜಿಯನ್ನೂ ಮಾಡಲಾಗಿದೆ.

About Author

Leave a Reply

Your email address will not be published. Required fields are marked *