ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ ಸಿನಿಮಾ

1 min read

ಸಿನಿಮಾ: ಹೇಳಿ ಕೇಳಿ ಇದು ಪ್ರಯೋಗಾತ್ಮಕ ಬಣ್ಣದ ಲೋಕ..ಅದರ ಮುಂದುವರೆದ ಭಾಗವಾಗಿ ರೂಪಗೊಳ್ಳುತ್ತಿರುವ ಸಿನಿಮಾ ಇನ್ನಿಲ್ಲ ಸೂರಿ. ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗ್ತಿರುವುದು ನಿರ್ದೇಶಕ ಪ್ರೇಮ್ ಕುಮಾರ್ ಹೆಚ್ ಆರ್. ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರೇಮ್ ಕುಮಾರ್ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಕಿರುತೆರೆ ಮಾತ್ರವಲ್ಲ ಮನೆ ಮಾರಾಟಕ್ಕಿದೆ ಹಾಗೂ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ಹಿರಿತೆರೆಯಲ್ಲಿ ನಿರ್ದೇಶನದ ಕೌಶಲ್ಯಗಳನ್ನು ಕಲಿತುಕೊಂಡಿದ್ದಾರೆ. ಈ ಭರವಸೆಯೊಂದಿಗೆ ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಪ್ರೇಮ್ ಕುಮಾರ್ ಸ್ವತಂತ್ರ ನಿರ್ದೇಶಕರಾಗಿ ನಿರ್ದೇಶನದ ಅಖಾಡಕ್ಕೆ ಧುಮುಕ್ಕಿದ್ದಾರೆ.

ಇತ್ತೀಚೆಗೆಷ್ಟೇ ಬೆಂಗಳೂರಿನ RR ನಗರದಲ್ಲಿರುವ ಶ್ರೀ ಶೃಂಗಗಿರಿ ಷಣ್ಮುಖ ಸನ್ನಿಧಿಯಲ್ಲಿ ಇನ್ನಿಲ್ಲ ಸೂರಿ ಸಿನಿಮಾದ ಮುಹೂರ್ತ ನೆರವೇರಿದೆ. ನೀರ್ ದೋಸೆ ಹಾಗೂ ತೋತಾಪುರಿ ಸಿನಿಮಾಗಳ ಖ್ಯಾತಿಯ ವಿಜಯ್ ಪ್ರಸಾದ್ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರೀ, ಶೇಖರ್, ಪೃಥ್ವಿರಾಜ್ ಕುಲಕರ್ಣಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಸಿನಿಮಾಗೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.

ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಬಡ್ತಿ ಪಡೆದಿರುವ ಪ್ರೇಮ್ ಕುಮಾರ್ ಕನಸಿಗೆ ಸೂರಿ ಸಾಥ್ ಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಧಾರಾವಾಹಿಗಳಲ್ಲಿ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಸೂರಿ ಈ ಚಿತ್ರಕ್ಕೆ ಹಣ ಹಾಕಲಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಡೆಯುವ ಹದಿ ಹರೆಯದ ಯುವಕ ಯುವತಿಯರ ಮನಸ್ಥಿತಿಯನ್ನು ಅತ್ಯಂತ ಮನರಂಜನಾತ್ಮಕವಾಗಿ ಹಾಗೂ ಕರುಳು ಹಿಂಡುವ ತಾಯಿ ಮಗನ ಕಥೆಯನ್ನು ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಪ್ರೇಮ್ ಕುಮಾರ್. ಸದ್ಯ ಕಲಾವಿದರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಚಿತ್ರತಂಡ ಶೀರ್ಘದಲ್ಲಿಯೇ ಮಾಹಿತಿ ರಿವೀಲ್ ಮಾಡಲಿದೆ. ಮಂಡ್ಯ ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

About Author

Leave a Reply

Your email address will not be published. Required fields are marked *