ಮೊಟ್ಟೆ ಸೇವಿಸದ ಮಕ್ಕಳಿಗೆ ಬಿಸಿಯೂಟಕ್ಕೆ ಚಿಕ್ಕಿ!

1 min read

ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ನೀಡುವ ಮೊಟ್ಟೆಗೆ ಪರ್ಯಾಯವಾಗಿ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣಿನ ಬೆಲ್ಲದಿಂದ ತಯಾರಿಸಿದ ಚಿಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಧ್ಯಾಹ್ನದೂಟದ ವೇಳೆ‌ ಮಕ್ಕಳಿಗೆ ಮೊಟ್ಟೆಯನ್ನು ಕೈಬಿಡಬೇಕು ಎಂಬ ಹೆಚ್ಚುತ್ತಿರುವ ಬೇಡಿಕೆ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕಷ್ಟು ತಲೆಕೆಡಿಸಿಕೊಂಡಿತ್ತು. ಮೊಟ್ಟೆಯಲ್ಲಿನ ಪೌಷ್ಟಿಕಾಂಶಗಳಿಗೆ ಸಮಾನವಾದ ಚಿಕ್ಕಿಯನ್ನು ಬಾಳೆಹಣ್ಣಿನ ಬದಲು ವಿತರಿಸಲು ನಿರ್ಧರಿಸಲಾಗಿದೆ.

  • ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಈ ಸಂಬಂಧ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಬಗ್ಗೆ ಮಾತುಕತೆ ನಡೆಸಿದ್ದು, ಚಿಕ್ಕಿ ಉತ್ಪಾದಿಸುವ ಮತ್ತು ಪೂರೈಸುವ ವಿಧಿವಿಧಾನಗಳ ಬಗ್ಗೆ ಚರ್ಚಿಸಿದೆ.
    ಪೌಷ್ಟಿಕಾಂಶ ಮಟ್ಟವನ್ನು ಖಾತರಿಪಡಿಸುವ ಮುನ್ನ ಚಿಕ್ಕಿ ಮಕ್ಕಳಿಗೆ ತಲುಪುವ ಮೊದಲು ಹಲವು ಪರೀಕ್ಷೆಗಳಿಗೆ ಒಳಪಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಯಾಂಪಲ್ ತಯಾರಿಸುವಂತೆ ಈಗಾಗಲೇ ಕೆಎಂಎಫ್‌ಗೆ ಕೇಳಿಕೊಂಡಿದ್ದೇವೆ. ಈ ಮಾದರಿಯನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಗೆ ಪೌಷ್ಟಿಕಾಂಶ ಪರೀಕ್ಷೆಗಾಗಿ ಕಳುಹಿಸಲಾಗುವುದು. ಅದು ಅನುಮೋದಿಸಿದ ಬಳಿಕ ಉತ್ಪಾದನೆಗೆ ಕಾರ್ಯಾದೇಶ ನೀಡುವುದಾಗಿ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳಿಗೆ ಬಾಳೆಹಣ್ಣು ಪರ್ಯಾಯವಲ್ಲ ಎಂಬ ಆಕ್ಷೇಪ ಹಾಗೂ ಸಲಹೆಗಳ ಹಿನ್ನೆಲೆಯಲ್ಲಿ ಬಾಳೆಹಣ್ಣಿನ ಬದಲು ಚಿಕ್ಕಿ ನೀಡಲು ಇಲಾಖೆ ಕ್ರಮ ಕೈಗೊಂಡಿದೆ. “ನಾವು ಕೆಲ ಪೌಷ್ಟಿಕಾಂಶ ತಜ್ಞರ ಸಲಹೆ ಪಡೆದಾಗ, ಬೆಲ್ಲ ಮತ್ತು ಸ್ವಲ್ಪ ಜಜ್ಜಿದ ನೆಲಗಡಲೆ, ಪ್ರೊಟೀನ್ ಮತ್ತು ಕಬ್ಬಿಣಭದ ಅಂಶದ ಒಳ್ಳೆಯ ಮೂಲಗಳು ಎಂದು ಹೇಳಿದ್ದಾರೆ” ಎಂದು ಅಧಿಕಾರಿ ವಿವರಿಸಿದ್ದಾರೆ. ಆದರೆ ಇಲಾಖೆಗೆ ಇರುವ ದೊಡ್ಡ ಸವಾಲೆಂದರೆ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ಇಲ್ಲದ ಚಿಕ್ಕಿ ಪೂರೈಸುವುದು.
“ಚಿಕ್ಕಿಯನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಲು ನಾವು ಬಯಸುವುದಿಲ್ಲ. ಆದರೆ ತೇವಾಂಶವನ್ನು ಕಾಗದ ಹೀರಿಕೊಂಡು, ಕರಗುವ ಸಾಧ್ಯತೆ ಇರುವುದರಿಂದ ಕಾಗದದಲ್ಲಿ ಸುತ್ತುವುದೂ ಕಷ್ಟ. ಇದನ್ನು ಹೊರತುಪಡಿಸಿ ಚಿಕ್ಕಿ ವಿತರಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಮದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *