ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ದ ಸಂಪಾದಕ ಕೆ.ವಿ.ಸಂಪತ್ ಕುಮಾರ್ ನಿಧನ
1 min readಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದ ಮೈಸೂರಿನ ಸುಧರ್ಮ ಸಂಸ್ಕೃತ ದಿನ ಪತ್ರಿಕೆ ಸಂಪಾದಕ ಹಾಗೂ ಮಾಲೀಕರಾಗಿದ್ದ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರ ಹುಟ್ಟೂರು ನಂಜನಗೂಡು ತಾಲೂಕು ಕಳಲೆ ಗ್ರಾಮ. ತಂದೆ ನಾಡದೂರ್ ವರದರಾಜ್ ಅಯ್ಯಂಗಾರ್, ತಾಯಿ ಸೀತಾಲಕ್ಷ್ಮೀ. ಪಂಡಿತ್ ವರದರಾಜ ಅಯ್ಯಂಗಾರ್ 1970ರಲ್ಲಿ ಪತ್ರಿಕೆ ಪ್ರಾರಂಭಿಸಿದ್ದರು. ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನ ವರದರಾಜ ಅಯ್ಯಂಗಾರ್ ನೀಡುತ್ತಿದ್ದರು. ತಂದೆಯ ಇಚ್ಚೆಯಂತೆ ಸಂಸ್ಕೃತ ಪಸರಿಸುವ ಕೆಲಸಕ್ಕೆ ಮುಂದಾಗಿದ್ದರು.
2009 ರಲ್ಲಿ “ಸುಧರ್ಮ” ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ. ಅವರಿಗೆ 2 ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಆದರೇ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ರವರು ವಿಧಿವಶರಾಗಿದ್ದಾರೆ.