ನಾನು ಮುಖ್ಯಮಂತ್ರಿ ಆಗುವುದಕ್ಕಿಂತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ: ಡಿ.ಕೆ. ಶಿವಕುಮಾರ್

1 min read

ನಾನು ಮುಖ್ಯಮಂತ್ರಿ ಆಗುವುದಕ್ಕಿಂತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ: ಡಿ.ಕೆ. ಶಿವಕುಮಾರ್

ಮೈಸೂರು:

‘ನಾನು ಮುಖ್ಯಮಂತ್ರಿ ಆಗುವುದಕ್ಕಿಂತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ. ಪಕ್ಷದಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಎಸ್.ಎಂ. ಕೃಷ್ಣ ಅವರ ನಂತರ ನಾನು ಪಕ್ಷದ ಅಧ್ಯಕ್ಷನಾಗಿದ್ದು, ಒಕ್ಕಲಿಗ ಸಮಾಜ ನನ್ನ ಬೆನ್ನ ಹಿಂದೆ ನಿಲ್ಲಬೇಕು ಎಂದು ಮನವಿ ಮಾಡಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪತ್ರಕರ್ತರು, ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಹೇಳುವ ಮೂಲಕ ತಾವು ಪರೋಕ್ಷವಾಗಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದೀರಾ ಎಂದು ಪ್ರಶ್ನಿಸಿದಾಗ ಅವರು ಉತ್ತರಿಸಿದರು.

‘ನಾನೇನು ಸನ್ಯಾಸಿನಾ? ನಾನು ಖಾದಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ ಹೊರತು, ಕಾವಿ ಬಟ್ಟೆ ಹಾಕಿ ಬಂದಿಲ್ಲ. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರವನ್ನು ಪಕ್ಷ ತೀರ್ಮಾನ ಮಾಡಲಿದೆ. ನಾನು ಮುಖ್ಯಮಂತ್ರಿ ಆಗುವುದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದೇ ನನಗೆ ಮುಖ್ಯ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದರು.

ಈ ಸಮಯದಲ್ಲಿ ನಿಮ್ಮ ಸಮುದಾಯ ನಿಮ್ಮ ಜತೆ ನಿಲ್ಲುವುದೇ ಎಂಬ ಪ್ರಶ್ನೆಗೆ, ‘ಕೇವಲ ಒಂದು ಸಮುದಾಯವಲ್ಲ, ರಾಜ್ಯದ ಎಲ್ಲ ಸಮುದಾಯಗಳು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ನಾವು ಜಾತ್ಯಾತೀತ ತತ್ವದಲ್ಲಿ ನಡೆದುಕೊಂಡು ಬಂದಿದ್ದು, ಒಂದು ಜಾತಿ ಹಾಗೂ ಧರ್ಮಕ್ಕೆ ನಾಯಕನಲ್ಲ. ಕಾಂಗ್ರೆಸ್ ನಾಯಕ ಎಂದು ಅವರಿಗೆ ಮನವಿ ಮಾಡಿದ್ದೇನೆ.’ ಎಂದರು.

ಉಳಿದಂತೆ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಸಾರಾಂಶ ಹೀಗಿದೆ…

ನಮ್ಮ ರಾಜ್ಯ ಕುವೆಂಪು, ಶಿಶುನಾಳ ಶರೀಫರು, ಕನಕದಾಸರು, ಬಸವಣ್ಣನವರ ಕರ್ನಾಟಕ ಆಗಬೇಕು. ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಶಾಂತಿ ಭಂಗ ತರುವ ಪ್ರಯತ್ನ ಹೆಚ್ಚಾಗಿವೆ. ಜತೆಗೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ.

ಶ್ರೀಮತಿ ಸೋನಿಯಾ ಗಾಂಧಿ ಅವರು ಎಲ್ಲ ನಾಯಕರ ಜತೆ ಚರ್ಚೆ ಮಾಡಿ ನನಗೆ ಅಧ್ಯಕ್ಷ ಸ್ಥಾನ ಹಾಗೂ ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದರು. ಜತೆಗೆ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದು, ನಂತರ ನಾನು ಬೇಡಿಕೆ ಇಟ್ಟ ಮೇಲೆ ಮತ್ತಿಬ್ಬರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಯಿತು.

ಕೋವಿಡ್ ಸಂದರ್ಭದಲ್ಲಿ 2 ವರ್ಷ ಮನೆಯಿಂದ ಹೊರಬರುವ ಪರಿಸ್ಥಿತಿ ಇಲ್ಲದಿದ್ದರೂ ನಾವು ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಮುಚ್ಚಲಿಲ್ಲ. ರಾಜ್ಯದ ಜನರ ರಕ್ಷಣೆಗೆ, ರೈತನ ಸಂಕಟಕ್ಕೆ ಸ್ಪಂದಿಸಿ, ಬಡವರಿಗೆ ಆಹಾರ ಪದಾರ್ಥಗಳನ್ನು ನೆರವಾಗಿ ನೀಡಿದೆವು. ಆರೋಗ್ಯ ಹಸ್ತ, ಆಂಬ್ಯುಲೆನ್ಸ್ ಸೇವೆ, ಆಕ್ಸಿಜನ್ ವಿತರಣೆ ಕಾರ್ಯಕ್ರಮ ಮೂಲಕ ಜನರಿಗೆ ವೈದ್ಯಕೀಯ ಸೇವೆ ಮಾಡಿದೆವು.

ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದಲ್ಲಿ ಕೇವಲ 3 ಜನ ಸತ್ತರು ಎಂದು ಸರಕಾರ ಹೇಳಿತ್ತು. ನಾನು ಸಿದ್ದರಾಮಯ್ಯನವರು ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ನ್ಯಾಯಾಂಗ ಸಮಿತಿ ವಿಚಾರಣೆ ಮಾಡಿ 37 ಮಂದಿ ಸತ್ತಿದ್ದಾರೆ ಎಂಬ ಸತ್ಯಾಂಶ ಬಯಲಾಯಿತು. ನಂತರ ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡಿ ಎಲ್ಲ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರವನ್ನು ನೀಡಿ ಸಾಂತ್ವನ ಹೇಳಿದೆವು.

ಈಗಲೂ ಕೋವಿಡ್ ನಿಂದ ಸತ್ತವರಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ವ್ಯಾಕ್ಸಿನೇಟ್ ಕರ್ನಾಟಕ ಕಾರ್ಯಕ್ರಮದ ಮೂಲಕ ಪ್ರಚಾರ ಮಾಡಿ ಕೆಲವು ಕಡೆಗಳಲ್ಲಿ ಉಚಿತ ಲಸಿಕೆ ವಿತರಿಸಲಾಯಿತು. ಕೋವಿಡ್ ಮೃತರಿಗೆ ಮರಣ ಪ್ರಮಾಣ ಪತ್ರ ನೀಡಲಿಲ್ಲ. ಕೋವಿಡ್ ಕೇರ್ ಸೆಂಟರ್ ನಲ್ಲಿ 10 ಸಾವಿರ ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು 6500 ಬೆಡ್ ಮಾಡಿದರು. ಔಷಧಿ, ಸಾಮಗ್ರಿಗಳಲ್ಲಿ ಭ್ರಷ್ಟಾಚಾರವನ್ನು ಬೆಳಕಿಗೆ ತಂದು ಹೋರಾಟ ಮಾಡಿದ್ದೇವೆ.

ಕೇಂದ್ರ ಸಚಿವರು ಸತ್ತಾಗಲೂ ಅವರ ಊರಿನಲ್ಲಿ ಅಂತ್ಯಕ್ರಿಯೆ ಮಾಡಲಾಗಲಿಲ್ಲ. ಇನ್ನು ಬಳ್ಳಾರಿಯಲ್ಲಿ ಮೃತದೇಹಗಳನ್ನು ಗುಂಡಿಗೆ ಬಿಸಾಕಲಾಗಿತ್ತು. ಮೃತರನ್ನು ಗೌರವದಿಂದ ಕಾಣಬೇಕು ಎಂದು ನಾವು ಅವರಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡಿದೆವು. ರಾಜ್ಯದುದ್ದಗಲಕ್ಕೆ ರೈತರ ಬೆಳೆ ಖರೀದಿ ಮಾಡಿ ಜನರಿಗೆ ಉಚಿತವಾಗಿ ನೀಡಿದೆವು.

ಕಾರ್ಮಿಕರು ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ದುಪ್ಪಟ್ಟು ಟಿಕೆಟ್ ದರ ನಿಗದಿ ಮಾಡಲಾಗಿತ್ತು. ನಾವು ಹೋರಾಟ ಮಾಡಿ ಅವರಿಗೆ ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಲು ಮುಂದಾದೆವು. ಆಗ ಸರ್ಕಾರ ಕಾರ್ಮಿರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿತು.

ಹೀಗೆ ಕೋವಿಡ್ ಸಮಯದಲ್ಲಿ ಪಕ್ಷ ಹತ್ತು ಹಲವಾರು ಕಾರ್ಯಕ್ರಮದ ಮೂಲಕ ಹೋರಾಟ ಮಾಡಿದೆ. ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದಾಗ ಸರ್ಕಾರ 5 ಸಾವಿರದಂತೆ ಒಂದು ತಿಂಗಳ ಪರಿಹಾರ ಘೋಷಿಸಿತು. ಆದರೆ ಅದನ್ನು ಸರಿಯಾಗಿ ವಿತರಣೆ ಮಾಡಲಿಲ್ಲ. ನೆರೆ ರಾಜ್ಯಗಳಲ್ಲಿ ಆಸ್ತಿ ತೆರಿಗೆ ವಿನಾಯ್ತಿ, ವಾಣಿಜ್ಯ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಯಾವುದೇ ನೆರವು ನೀಡಲಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿದ್ದು, ಅದರಿಂದ ರಾಜ್ಯಕ್ಕೆ ಏನು ಪ್ರಯೋಜನವಾಯಿತು ಎಂದು ಲೆಕ್ಕ ಕೇಳಿದರೆ ನೀಡುತ್ತಿಲ್ಲ.

ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ಒಂದೊಂದು ದರ ನಿಗದಿ ಮಾಡಲಾಗಿದ್ದು, ಮಂತ್ರಿ ಸ್ಥಾನ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೂ ದರ ನಿಗದಿ ಮಾಡಿದ್ದಾರೆ. ಬಿಜೆಪಿ ನಾಯಕರೇ ಈ ಬಗ್ಗೆ ಹೇಳಿದ್ದಾರೆ.

ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ ಸರ್ಕಾರ ಈಗ 60 ಲಕ್ಷಕ್ಕೆ ಬಂದು ನಿಂತಿದೆ. ಇನ್ನು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಮಾಡಿದ್ದು, 10-15 ಅಂಕ ಪಡೆದವರಿಗೆ ಓಎಆರ್ ಪತ್ರಿಕೆ ತಿದ್ದಿ 100 ಅಂಕ ನೀಡಲಾಗುತ್ತಿದೆ. ಡಿಜಿ, ಎಡಿಜಿಪಿ, ಸಚಿವರು ಸೇರಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿಯಿಂದ 80-90 ಲಕ್ಷ ಹಣ ವಸೂಲಿ ಮಾಡಲಾಗಿದೆ.

ಕೇವಲ ಪಿಎಸ್ಐ ನೇಮಕಾತಿ ಮಾತ್ರವಲ್ಲ ಎಸ್ಡಿಎ, ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಇಂಜಿನಿಯರ್, ಪಶುವೈದ್ಯರು, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಇನ್ನು ರಾಜ್ಯದ ಗುತ್ತಿಗೆದಾರರ ಸಂಘವೇ ಈ ಸರ್ಕಾರದಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದೆ. ಈ ಬಗ್ಗೆ ಸಣ್ಣ ತನಿಖೆಯೂ ಆಗಿಲ್ಲ. ಚುನಾವಣೆ ಸಮಯದಲ್ಲಿ ಪ್ರಧಾನಿಗಳು ನಮ್ಮ ಸರ್ಕಾರ 10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದರು. ಆದರೆ ಮಂತ್ರಿ ಕಿರುಕುಳ ತಾಳಲಾರದೆ ಅವರದೇ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ. ಒಬ್ಬ ಮಂತ್ರಿ ಲಂಚದಿಂದ ರಾಜೀನಾಮೆ ನೀಡಿದರೆ, ಮತ್ತೊಬ್ಬ ಮಂತ್ರಿ ಮಂಚದ ವಿಚಾರವಾಗಿ ರಾಜೀನಾಮೆ ಕೊಟ್ಟರು. ಈಗ ಈ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ.

ಮೃತ ಗುತ್ತಿಗೆದಾರರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಸಚಿವರಾದ ನಿರಾಣಿ, ಕಾರಜೋಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೇ ಸಂತೋಷ್ ಪಾಟೀಲ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಒಪ್ಪಿಕೊಂಡಿದ್ದು, ಈವರೆಗೂ ಹಣ ನೀಡಿಲ್ಲ. ಮಂತ್ರಿಗಳ ಅನುಮತಿ ಇಲ್ಲದೆ 4-5 ಕೋಟಿ ಕಾಮಗಾರಿ ಮಾಡಲು ಸಾಧ್ಯವೇ? ರಾಜ್ಯದಲ್ಲಿ ಇಂತಹ ಹತ್ತಾರು ಪ್ರಕರಣಗಳಿವೆ.

ನಮ್ಮ ರಾಜಕೀಯ ಇತಿಹಾಸದಲ್ಲಿ ಕಂಡ, ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಬಿಜೆಪಿಯವರೇ ಆದ ವಿಶ್ವನಾಥ್ ಅವರೇ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇನ್ನು ಯತ್ನಾಳ್ ಅವರು ಕೂಡ ಹಲವು ಹಗರಣಗಳ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇದೆ ಎಂದು ಹೇಳುತ್ತಿದ್ದಾರೆ. ಆದರೂ ಅವರಿಗೆ ನೊಟೀಸ್ ನೀಡಿ ವಿಚಾರಣೆ ಮಾಡಿಲ್ಲ. ಆದರೆ ಅಕ್ರಮಗಳನ್ನು ಬಯಲಿಗೆಳೆದ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಡುತ್ತಾರೆ. ಅವರ ಪಕ್ಷದವರು ಹೇಳಿದಾಗ ಸುಮ್ಮನೆ ಇರುತ್ತಾರೆ, ವಿರೋಧ ಪಕ್ಷದವರು ಮಾತನಾಡಿದರೆ ಅವರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಪ್ರಮುಖ ಭಾಗವಾಗಿದ್ದು, ಈ ಸಮಯದಲ್ಲಿ ಜನರ ಅಭಿಪ್ರಾಯ ಹೇಗಿರಬೇಕು ಎಂದು ನೀವು ತೀರ್ಮಾನಿಸಬೇಕು. ನಾವು ಜನರಿಗಾಗಿ ನಮ್ಮದೇ ಕಾರ್ಯಕ್ರಮಗಳನ್ನು ನೀಡಿದ್ದೇವೆ. ನಮ್ಮ ಕೆಲವು ತಪ್ಪುಗಳಿಂದ ಹಿಂದೆ ನಾವು ಸೋತಿದ್ದೇವೆ. ಒಳ್ಳೆಯ ಸರ್ಕಾರವನ್ನು ನಾವು ಕಳೆದುಕೊಂಡಿದ್ದು, ಮುಂದೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಈಗ ಜನರಿಗೆ ಅರಿವಾಗಿದೆ. ನಾವು ಸಮಾಜದ ಧ್ವನಿಯಾಗಿ ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದ್ದು, ನಮಗೆ ಮಾಧ್ಯಮಗಳ ಸಹಕಾರ ಅಗತ್ಯವಿದೆ.

ಪ್ರಶ್ನೋತ್ತರ:

ಪ್ರತಿಪಕ್ಷಗಳು ದುರ್ಬಲವಾಗಿದ್ದು, ಹೀಗಾಗಿ ಅಧಿವೇಶನದಲ್ಲಿ ಹಲವು ಮಸೂದೆಗಳು ಮಂಡನೆಯಾಗುತ್ತಿವೆ ಎಂಬ ಪ್ರಶ್ನೆಗೆ, ‘ಪ್ರತಿಪಕ್ಷ ದುರ್ಬಲವಾಗಿದ್ದರೆ ಸಚಿವರು ರಾಜೀನಾಮ ನೀಡುತ್ತಿದ್ದರಾ? ಅಧಿವೇಶನದಲ್ಲಿ 40% ಕಮಿಷನ್ ವಿಚಾರ ಪ್ರಸ್ತಾಪ ಮಾಡಿದಾಗ ಆ ಬಗ್ಗೆ ಚರ್ಚೆ ಮಾಡಲು ಅವಕಾಶವನ್ನೇ ನೀಡಲಿಲ್ಲ. ರಾಷ್ಟ್ರಧ್ವಜ ವಿಚಾರ ತೆಗೆದುಕೊಂಡು ಐದು ರಾತ್ರಿ ಧರಣಿ ಮಾಡಿದೆವು. ಬೆಡ್ ಹಗರಣ, ಚಾಮರಾಜನಗರ ದುರಂತ ಹೀಗೆ ಎಲ್ಲಾ ವಿಚಾರದಲ್ಲೂ ಹೋರಾಟ ಮಾಡಿದ್ದೇವೆ. ಕರಾಳ ಮಸೂದೆ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಯೂ ಟರ್ನ್ ಮಾಡಿತು. ದೇಶದಲ್ಲಿ ಮೊದಲ ಬಾರಿಗೆ ರೈತ ವಿರೋಧಿ ಮಸೂದೆ ತಂದು ನಂತರ ಅದನ್ನು ಹಿಂಪಡೆದು ಪ್ರಧಾನಿಗಳು ಕ್ಷಮಾಪಣೆ ಕೋರಿದ್ದು ಇದೇ ಮೊದಲು. ಆದರೆ ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ಸರ್ಕಾರ ಹಿಂಪಡೆದಿಲ್ಲ. ರಾಜ್ಯದಲ್ಲಿ ದಪ್ಪ ಚರ್ಮದ ಸರ್ಕಾರ ಕೂತಿದೆ’ ಎಂದರು.

ಬಿಜೆಪಿ ಸರ್ಕಾರ ಸಾಧನ ಸಮಾವೇಶ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ಅವಕಾಶವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ತಾನು ಕೊಟ್ಟಿದ್ದ 169 ಭರವಸೆಗಳ ಪೈಕಿ 164 ಭರವಸೆ ಈಡೇರಿಸಿದ್ದೇವೆ. ಅವರ ಪ್ರಣಾಳಿಕೆ ಹಾಗೂ ಸಾಧನೆ ಹೋಲಿಕೆ ಮಾಡಿ. ಅವರು ಜನರಿಗೆ ಕೊಟ್ಟ ಮಾತಿನಲ್ಲಿ ಶೇ.40ರಷ್ಟು ಈಡೇರಿಸಲು ಸಾಧ್ಯವಾಗಿಲ್ಲ. ಅವರ 40% ಕಮಿಷನ್ ಪಡೆದಿರುವುದು, ಬೆಡ್ ಲಾಕ್ ದಂಧೆ, ಆಕ್ಸಿಜನ್, ಕೋವಿಡ್ ನಲ್ಲಿ ಹಣ ಮಾಡಿದ್ದೇವೆ. ರೈತರಿಗೆ ತಲುಪಬೇಕಾದ ಹಣ ತಲುಪಿಲ್ಲ, ಸಾಂಪ್ರದಾಯಿಕ ವೃತ್ತಿದಾರರಿಗೆ ಘೋಷಿಸಿದ ಹಣ ನೀಡಲು ಸಾಧ್ಯವಾಗಲಿಲ್ಲ, ಪಿಎಸ್ಐ ಹಗರಣ, ನೇಮಕಾತಿ ಹಗರಣ, ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಎಂಬ ಹೆಸರು ಪಡೆದಿದ್ದೇವೆ ಎಂದು ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲಿ. ನಮಗೆ ಯಾವುದೇ ಅಭ್ಯಂತರವಿಲ್ಲ, ಅವರಿಗೆ ಶುಭವಾಗಲಿ’ ಎಂದು ಛೇಡಿಸಿದರು.

ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಬಣಗಳಿದ್ದು ಚುನಾವಣೆ ಹೇಗೆ ನಡೆಸುತ್ತೀರಿ ಎಂಬ ಪ್ರಶ್ನೆಗೆ, ‘ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ನಮ್ಮಲ್ಲಿ ಯಾವುದೇ ಬಣ ಇಲ್ಲ. ಇರುವುದು ಒಂದೇ ಬಣ. ಅದು ಕಾಂಗ್ರೆಸ್ ಬಣ. ನಾನು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ ನನಗೆ ಪಕ್ಷವೇ ಮುಖ್ಯವಾಗಿದೆ’ ಎಂದು ತಿಳಿಸಿದರು.

ಶಿವಕುಮಾರ್ ಅವರು ಪದೇ ಪದೆ ದೇವರು ವರ ನೀಡುವುದಿಲ್ಲ, ಅವಕಾಶ ನೀಡುತ್ತಾನೆ ಎಂದು ಹೇಳುತ್ತಿರುವುದು ಯಾಕೆ ಎಂದು ಕೇಳಿದಾಗ, ‘ನಾವು ಭಗವಂತನ್ನನು ನಂಬುತ್ತೇವೆ. ಯಾರಿಗೂ ವರ ಸಿಗುವುದಿಲ್ಲ, ಶಾಪವೂ ಸಿಗುವುದಿಲ್ಲ. ಕೇವಲ ಅವಕಾಶ ಸಿಗುತ್ತದೆ. ಈ ರಾಜ್ಯಕ್ಕೆ ವರವಾಗಿ ಯಾವುದೇ ಸರ್ಕಾರ ಸಿಗುವುದಿಲ್ಲ. ಚುನಾವಣೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಒಂದು ಉಥ್ತಮ ಸರ್ಕಾರ ರಚಿಸಲು ಅವಕಾಶ ಸಿಕ್ಕಿದೆ. ಈ ರಾಜ್ಯಕ್ಕೆ ಹಾಗೂ ನಿಮ್ಮ ಮನೆಗೆ ಬೆಳಕು ನೀಡುವ ಕಾಂಗ್ರೆಸ್ ಸರ್ಕಾರವನ್ನು ತರಲು ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಕೇಳುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರು ದೂರವಾಗುತ್ತಾರೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಹೊರತು, ಬೇರೆಯವರು ಹೇಳಿದಂತೆ ಅಲ್ಲ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ವಿವಾದ ಮಾಡಬಾರದು ಎಂದು ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. ಯಾರು ಮಾತನಾಡಬೇಕೋ ಅವರು ಮಾತನಾಡಲಿ ಎಂದು ಹೇಳಿದೆ. ಜಮೀರ್ ಅವರು ಹಿಜಾಬ್ ತೆಗೆದರೆ ರೇಪ್ ಹೆಚ್ಚಾಗುತ್ತವೆ ಎಂದು ಹೇಳಿದರು. ಆಗ ನಾನು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರುವಂತೆ ಸೂಚಿಸಿದೆ. ಕೆಲವು ಮಾತುಗಳು ಉತ್ಸಾಹದಲ್ಲಿ ಬಂದು ನಂತರ ಅವು ಬೇರೆ ತಿರುವು ಪಡೆಯುತ್ತವೆ. ಆ ರೀತಿ ಆಗುವುದು ಬೇಡ. ಎಲ್ಲ ಜಾತಿ, ಧರ್ಮದವರು ಒಗ್ಗಟ್ಟಾಗಿ ಇರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಅದಕ್ಕಾಗಿಯೇ ನಾನು ಸದಾ ಈ ರಾಜ್ಯ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು ಎಂದು ಹೇಳಿದೆ’ ಎಂದು ತಿಳಿಸಿದರು.

ಚುನಾವಣೆಯಲ್ಲಿ ಟಿಕೆಟ್ ಪಡೆಯಬೇಕಾದರೆ ಸಿದ್ದರಾಮಯ್ಯ ಅಥವಾ ಶಿವಕುಮಾರ್ ಅವರಿಗೆ ನಿಷ್ಠರಾಗಿರಬೇಕೇ ಎಂದು ಕೇಳಿದಾಗ, ‘ನನಗೆ ಯಾರೂ ನಿಷ್ಠರಾಗುವುದು ಬೇಡ, ಕಾಂಗ್ರೆಸ್ ಗೆ ನಿಷ್ಠರಾಗಿದ್ದರೆ ಸಾಕು’ ಎಂದರು.

ಒಬ್ಬ ನಾಯಕರಿಗೆ ಜೈಕಾರ ಹಾಕಿದಾಗ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ ಯಾಕೆ ಎಂದು ಕೇಳಿದಾಗ, ‘ನನಗೆ ಯಾವುದೇ ಸಿಟ್ಟು ಬರುವುದಿಲ್ಲ. ಸಿಟ್ಟಿನ ಅಗತ್ಯವೂ ಇಲ್ಲ. ನನಗೆ ಜೈಕಾರ ಹಾಕುವುದು ಬೇಡ, ಕಾಂಗ್ರೆಸ್ ಗೆ ಜೈಕಾರ ಹಾಕಿ’ ಎಂದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ವಿಚಾರವಾಗಿ ಪ್ರಶ್ನೆ ಕೇಳಿದಾಗ, ‘ಮನುಷ್ಯನ ಬದುಕಿನಲ್ಲಿ ಒಂದೊಂದು ಮೈಲಿಗಲ್ಲು ಇರುತ್ತದೆ. ಕೆಲವರು ನಾಮಕರಣ ಮಾಡಿಕೊಳ್ಳುತ್ತಾರೆ, ಕೆಲವರು ಕಿವಿ ಚುಚ್ಚಿಸುವ, ಮೂಗುಬಟ್ಟು ಚುಚ್ಚಿಸುವ, ಉಪನಯನ, ಮದುವೆ ಹೀಗೆ ಒಂದೊಂದು ರೀತಿ ಸಂಭ್ರಮಿಸುತ್ತಾರೆ. ಕೆಲವರು ಪುಸ್ತಕ ಬರೆದು ತಮ್ಮ ಭಾವನೆ ಹಂಚಿಕೊಳ್ಳುತ್ತಾರೆ. ಆಗ ಅವರ ವಿಚಾರ ಪ್ರಚಾರ ಆಗಬೇಕು. ಸಿದ್ದರಾಮಯ್ಯ ಅವರು 75 ವರ್ಷಗಳಲ್ಲಿ 40 ವರ್ಷ ರಾಜಕಾರಣ ಮಾಡಿದ್ದು, 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆಡಳಿತದಲ್ಲಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದನ್ನು ಮೆಲುಕು ಹಾಕಬಾರದೆ? ಅವರ ಆಚಾರ ವಿಚಾರಗಳು ಪ್ರಚಾರ ಆಗಬೇಕು. ಅದಕ್ಕಾಗಿ ಅವರ ಅಭಿಮಾನಿಗಳೆಲ್ಲ ಹುಟ್ಟುಹಬ್ಬ ಆಚರಿಸಲು ಮನವಿ ಮಾಡಿದ್ದಾರೆ. ಅದಕ್ಕೆ ಬೇಡ ಎಂದು ಹೇಳಲು ಸಾಧ್ಯವೇ. ಇದು ವ್ಯಕ್ತಿ ಪೂಜೆ ಎಂದು ನೀವು ಭಾವಿಸಿದ್ದೀರಿ. ಇದು ವ್ಯಕ್ತಿ ಪೂಜೆ ಅಲ್ಲ. ಪಕ್ಷದ ಪೂಜೆ. ನಾನು ಹಾಗೂ ರಾಹುಲ್ ಗಾಂಧಿ ಅವರು ಆ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸುತ್ತೇವೆ’ ಎಂದರು.

ಪಕ್ಷದ ಪಾದಯಾತ್ರೆ ಕಾರ್ಯಕ್ರಮದ ಜತೆ ಈ ಹುಟ್ಟುಹಬ್ಬದ ಕಾರ್ಯಕ್ರಮ ತೊಂದರೆ ಆಗುವುದಿಲ್ಲವೇ ಎಂದು ಕೇಳಿದಾಗ, ‘ರಾಜಕಾರಣದಲ್ಲಿ ದಿನನಿತ್ಯ ಒಂದಲ್ಲಾ ಒಂದು ವಿಚಾರ ಬರುತ್ತಲೇ ಇರುತ್ತದೆ. ನನಗೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಷಷ್ಠಿ ಪೂಜೆ ಮಾಡಿ, ಹೋಮ ಮಾಡಿ ಎಂದರು. ನಾನು ಅದ್ಯಾವುದು ಬೇಡ ಎಂದು ಕುಟುಂಬದ ಸಮೇತ ತಾಯಿ ಚಾಮುಂಡೇಶ್ವರಿಗೆ ಕೈಮುಗಿದೆ. ಅಭಿಮಾನಿಗಳಿಗೆ ಬೇರೆ ರೀತಿ ಆಸೆ ಇರುತ್ತದೆ. ಅದಕ್ಕೆ ಏನು ಮಾಡಲು ಸಾಧ್ಯ’ ಎಂದರು.

ಖರ್ಗೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದು, ಸಿದ್ದರಾಮಯ್ಯ ಅವರು ಯಾಕೆ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಕೇಳಿದಾಗ, ‘ಅದು ಅವರ ಇಚ್ಛೆ. ನಾನು ಕೂಡ ನನ್ನ ಹುಟ್ಟುಹಬ್ಬ ಆಚರಣೆ ಬೇಡ ಎಂದು ಹೇಳಿ ಕೇದಾರನಾಥಕ್ಕೆ ಹೋಗಿಬಂದೆ. ನನ್ನ ಅಭಿಮಾನಿಗಳು ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತೇನೆ ಎಂದು ಹೇಳಿದಾಗ ಯಾವುದೂ ಬೇಡ ಎಂದು ಹೇಳಿದೆ. ಅದು ನನ್ನ ವೈಯಕ್ತಿಕ ಆಯ್ಕೆ. ಆದರೂ ಕನಕಪುರ, ರಾಮನಗರದಲ್ಲಿ ಸಾವಿರಾರು ಜನ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ ನಡೆಸಿದರು’ ಎಂದು ತಿಳಿಸಿದರು.

ಕಾಂಗ್ರೆಸ್ ಸ್ಪಷ್ಟ ಬಹುಮತ ಬಂದರೆ ದಲಿತರು ಮುಖ್ಯಮಂತ್ರಿ ಆಗುತ್ತಾರಾ ಎಂಬ ಪ್ರಶ್ನೆಗೆ, ‘ಯಾಕೆ ಆಗಬಾರದು. ವೀರಪ್ಪ ಮೊಯ್ಲಿ, ಬಂಗಾರಪ್ಪ, ಸಿದ್ದರಾಮಯ್ಯ, ದೇವರಾಜ ಅರಸು, ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದು, ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು’ ಎಂದರು.

ನೇಮಕಾತಿ ಅಕ್ರಮದ ವಿಚಾರವಾಗಿ ಕೇಳಿದಾಗ, ‘ಸರ್ಕಾರ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಈ ಎಲ್ಲ ಆರೋಪಗಳನ್ನು ನಾವು ತನಿಖೆ ಮಾಡಿಸುತ್ತೇವೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದರು.

ಕಾಂಗ್ರೆಸ್ ಗೆ ಹಿಂದುತ್ವ ವಿರೋಧಿ ಹೇಳಿಕೆ ಮುಳುವಾಗಲಿದೆಯೇ ಎಂದು ಕೇಳಿದಾಗ, ‘ಭ್ರಷ್ಟಾಚಾರ ದಿನನಿತ್ಯ ಜನರ ಮನೆ ಬಾಗಿಲು ತಟ್ಟುತ್ತಿದೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಹಿಂದುತ್ವದ ಹೆಸರಲ್ಲಿ ಸಮಾಜವನ್ನು ಧೃವೀಕರಣ ಮಾಡಲು ಪ್ರಯತ್ನಿಸುತ್ತಿದೆ. ಇಲ್ಲದಿದ್ದರೆ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳ ನಿರ್ಬಂಧ ಹೇರುವುದು, ಹಲಾಲ್ ವಿಚಾರಗಳು ಚರ್ಚೆಗೆ ಬಂದಿವೆ. ಒಬ್ಬೊಬ್ಬರು ಒಂದೊಂದು ವೃತ್ತಿ ಮಾಡುತ್ತಾರೆ. ಒಬ್ಬ ಸಂಸದ ಅವರನ್ನು ಪಂಚರ್ ಹಾಕುವವರು ಎಂದ. ಅವರು ಪಂಚರ್ ಹಾಕದಿದ್ದರೆ ಅವರ ಗಾಡಿ ಮುಂದಕ್ಕೆ ಹೋಗಬೇಕಲ್ಲವೇ. ಮಾವಿನ ತೋಟಕ್ಕೆ ಔಷಧಿ ಹೊಡೆದು, ಅವುಗಳ ವ್ಯಾಪಾರ ಅವರೇ ಮಾಡುತ್ತಾರೆ. ಹಸು ಎತ್ತುಗಳಿಗೆ ಲಾಳ ಕಟ್ಟುವವರು, ಮೃತ ಪಶುಗಳನ್ನು ಹೊತ್ತು ಹೋಗುವವರು ಯಾರು? ರೈತರಿಗೆ ನೆರವಾಗುವವರು ಅವರೇ ಅಲ್ಲವೇ? ಇವರು ಬಂದು ಇದೆಲ್ಲ ಮಾಡುತ್ತಿದ್ದರಾ? ಕೋವಿಡ್ ಸಮಯದಲ್ಲಿ ಸಾವಿರಾರು ಅನಾಥ ಶವಗಳನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಿದರಲ್ಲ ಅದನ್ನು ಮುಸಲ್ಮಾನರಲ್ಲದೆ ಬೇರೆ ಯಾರು ಮಾಡಿದರು? ಹೊರ ದೇಶದಲ್ಲಿ ನಮ್ಮ ಭಾರತದವರು ಅಲ್ಪಸಂಖ್ಯಾತರಲ್ಲವೆ’ ಎಂದು ಕೇಳಿದರು.

ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲೋ ವ್ಯಕ್ತಿಗತ ನಾಯಕತ್ವದಲ್ಲೋ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಪಕ್ಷದಲ್ಲಿ ಹಲವು ನಾಯಕರಿದ್ದಾರೆ. ಎಲ್ಲರಿಗೂ ನಾಯಕತ್ವದ ಅರ್ಹತೆ ಇದೆ. ಸದ್ಯದ ಮಟ್ಟಿಗೆ ಅಧ್ಯಕ್ಷ ಸ್ಥಾನವನ್ನು ನನಗೆ, ವಿರೋಧ ಪಕ್ಷದ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹರಿಪ್ರಸಾದ್ ಅವರಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಖರ್ಗೆ ಅವರಿಗೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಯಾವುದೇ ವೈಯಕ್ತಿಕ ಮುಂದಾಳತ್ವದಲ್ಲಿ ಚುನಾವಣೆಗೆ ಹೋಗುವುದಿಲ್ಲ. ಇದು ನನಗೆ ಇರುವ ನಿರ್ದೇಶನ’ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಹೇಗೆ ತಯಾರಿ ನಡೆಸುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. 130ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ವರದಿ ಬಂದಿದೆ. ಅವಧಿಪೂರ್ವ ಚುನಾವಣೆ ಬಂದಲೂ ನಾವು ಸಿದ್ಧವಾಗಿದ್ದೇವೆ’ ಎಂದು ತಿಳಿಸಿದರು.

ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಗಳನ್ನು ಬಿಜೆಪಿಯವರಿಗೆ ಕೇಳಿ. ನಾವು ಪ್ರಣಾಳಿಕೆಯಲ್ಲಿ ತಿಳಿಸುತ್ತೇವೆ. ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ನಂತರ ಇಲ್ಲಿಗೆ ಬರುತ್ತೇವೆ. ಆಗ ಈ ಪ್ರಶ್ನೆ ಕೇಳಿ’ ಎಂದರು.

ಬೇರೆ ಪಕ್ಷದವರು ಕಾಂಗ್ರೆಸ್ ಗೆ ಬರುತ್ತಾರಾ ಎಂಬ ವಿಚಾರವಾಗಿ ಕೇಳಿದಾಗ, ‘ಶುಭ ಮುಹೂರ್ತ, ಶುಭಗಳಿಗೆ ಬಂದಾಗ ಎಲ್ಲವೂ ತಿಳಿಯುತ್ತದೆ. ಈಗಲೆ ಎಲ್ಲವನ್ನು ಹೇಳಿ ಬೇರೆಯವರನ್ನು ಯಾಕೆ ಎಚ್ಚರಿಸೋಣ’ ಎಂದರು.

ಮೇಕೆದಾಟು ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆಗಸ್ಟ್ 15ರಂದು ದೇಶಕ್ಕೆ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದು, ರಾಜ್ಯದ ಎಲ್ಲ ಕಡೆಗಳಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಬರಬೇಕು. ಸಂಗೊಳ್ಳಿ ರಾಯಣ್ಣ ವೃತ್ತದಿಂದ 1 ಲಕ್ಷ ಜನ ರಾಷ್ಟ್ರ ಧ್ವಜ ಹಿಡಿದು ನ್ಯಾಷನಲ್ ಕಾಲೇಜು ಮೈದಾನ ಸೇರುತ್ತೇವೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ಸಂಘಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಘಟಕ, ಕಲಾವಿದರು ಭಾಗವಹಿಸುವಂತೆ ಆಹ್ವಾನ ನೀಡುತ್ತೇವೆ. ಆ.1ರಿಂದ 10ರವರೆಗೆ ಎಲ್ಲ ಜಿಲ್ಲೆಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಬೆಂಗಳೂರಿನ ಕಾರ್ಯಕ್ರಮಕ್ಕೆ ಈ ಭಾಗದ ಜನರು ಆಗಮಿಸಬೇಕು ಎಂದು ಆಹ್ವಾನ ನೀಡುತ್ತೇನೆ’ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *