ಸಿಎಸ್ಆರ್ ಫಂಡ್ ನೀಡಿದ ಕಂಪನಿಗಳಿಗೆ ಧನ್ಯವಾದ ಸಲ್ಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min readಮೈಸೂರು: ಕೋವಿಡ್–19 ಬಿಕ್ಕಟ್ಟು ನಿಭಾಯಿಸಲು ಜಿಲ್ಲಾಡಳಿತಕ್ಕೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್ಆರ್ ಫಂಡ್) ನೀಡುವ ಮೂಲಕ ನೆರವಾದ ಕೈಗಾರಿಕ ಕಂಪನಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಧನ್ಯವಾದಗಳನ್ನು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇವಲ 20ದಿನಗಳ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿರುವ 24 ವಿವಿಧ ಕೈಗಾರಿಕಾ ಕಂಪನಿಗಳು ಸಿಎಸ್ಆರ್ ಫಂಡ್ ಅಡಿಯಲ್ಲಿ 12.53 ಕೋಟಿ ರೂ. ನೀಡಿವೆ. ಈ ಹಣವು ಕೋವಿಡ್ ನಿರ್ವಹಣೆಗೆ ಉಪಯೋಗವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 54 ಕೈಗಾರಿಕೆಗಳು ಸಿಎಸ್ಆರ್ ಫಂಡ್ ನೀಡಬಹುದಾಗಿದ್ದು, ಅದರಲ್ಲಿ 41 ಕೈಗಾರಿಕೆಗಳು ಫಂಡ್ ನೀಡಲು ಮುಂದೆ ಬಂದಿವೆ. ಇಲ್ಲಿಯವರೆಗೆ ವಿವಿಧ ಕಂಪನಿಗಳು ಐಸಿಯು ಹಾಸಿಗೆ, ಆಕ್ಸಿಜನ್ ಕಾನ್ಸನ್ಟ್ರೇಟರ್, ಆಂಬುಲೆನ್ಸ್, ಮೆಡಿಕಲ್ ಕಿಟ್, ಆಕ್ಸಿಜನ್ ಪ್ಲಾಂಟ್, ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ಇನ್ನಿತರರು ವೈದ್ಯಕೀಯ ಸಲಕರಣೆಗಳನ್ನು ನೀಡಿವೆ ಎಂದು ಮಾಹಿತಿ ನೀಡಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪ ನಾಗ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಮೃತ್ಯುಂಜಯ ಮತ್ತು ಇವರೊಂದಿಗೆ ಕೆಲಸ ಮಾಡಿದ ಅಧಿಕಾರಿಗಳ ತಂಡ ಸಿ.ಎಸ್.ಆರ್. ಅನುದಾನ ಕ್ರೂಡಿಕರಿಸುವಲ್ಲಿ ಯಶಸ್ವಿಯಾಗಿ ಸಮನ್ವಯ ಮಾಡಿದ್ದಾರೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕೈಗಾರಿಕೋದ್ಯಮಿಗಳು ಇನ್ನು ಮುಂದೆಯೂ ಇದೇ ರೀತಿಯ ಸಹಕಾರ ನೀಡಬೇಕು. ಈಗ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಬೇಕಾಗುವ ಔಷಧಿ, ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಸಹ ಕೈಗಾರಿಕೋದ್ಯಮಿಗಳು ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.