ರಾಜವಂಶಸ್ಥರಿಗೆ ದಸರಾಗೆ ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ!

1 min read

ಮೈಸೂರು – ಅರಮನೆ : 2021ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಮೈಸೂರು ಅರಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿದ್ದಾರೆ. ಅರಮನೆಯಲ್ಲಿರುವ ರಾಜವಂಶಸ್ಥರ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಎಸ್ ಟಿ ಸೋಮಶೇಖರ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜೊತೆ ಉಭಯಕುಶಲೋಪರಿ ಮಾತುಕತೆ ನಡೆಸಿದರು.

ಸರ್ಕಾರದಿಂದ ರಾಜವಂಶಸ್ಥರಿಗೆ ಅಧಿಕೃತ ಆಹ್ವಾನ

ಬಳಿಕ ಈ ಬಾರಿಯ ದಸರಾ ಮಹೋತ್ಸವದಲ್ಲಿ ರಾಜ ಮನೆತನದವರು ಭಾಗಿಯಾಗುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ರು. ಈ ವೇಳೆ ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ, ಮೇಯರ್ ಸುನಂದ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್‌.ವಿ ರಾಜೀವ್, ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರತಿವರ್ಷದ ಪದ್ಧತಿಯಂತೆ ದಸರಾ ಮಹೋತ್ಸವಕ್ಕೆ ರಾಜಮಾತೆಯವರನ್ನು ಆಹ್ವಾನಿಸಲಾಯಿತು. ದಸರಾಗೆ ಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅರಮನೆಯ ಕಾರ್ಯಕ್ರಮಗಳಿಗೂ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುವಂತೆ ಅವರೂ ಕೋರಿದರು. ಅದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದರು.

ಮಾಧ್ಯಮದವರಿಗೆ ಮಾಹಿತಿ ನೀಡಿದ ಸಚಿವರು

ಅ.7ರಿಂದ 15 ರವರೆಗೆ ದಸರಾ ನಡೆಯಲಿದೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 400 ಜನರಿಗೆ ಅವಕಾಶ ನೀಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಯಾವುದೇ ನಿರ್ಬಂಧ ಇಲ್ಲ. ದೇವರ ದರ್ಶನ ಮಾಡುವವರು ಮಾಡಬಹುದು ಎಂದು ಹೇಳಿದರು.

ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಂಬೂ ಸವಾರಿ ನಡೆಯಲಿದೆ. ಇದರ ಹೊರತು ಬೇರೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಜಂಬೂ ಸವಾರಿ ವೀಕ್ಷಣೆಗೆ 500 ಜನರಿಗೆ ಅವಕಾಶವಿದ್ದು, ಯಾವರೀತಿ ಅವಕಾಶ ಕಲ್ಪಿಸಬೇಕು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

About Author

Leave a Reply

Your email address will not be published. Required fields are marked *