*”ಆಗಸದಲ್ಲಿ ಸಹಸ್ರಾರು ಡ್ರೋನ್‌ಗಳ ಕಲರವ**

– ದಸರಾ ಡ್ರೋನ್‌ ಶೋಗೆ 2ನೇ ದಿನವೂ ಉತ್ತಮ ಸ್ಪಂದನೆ

– ಸೆಸ್ಕ್‌ ಪ್ರಯತ್ನಕ್ಕೆ ಮನಸೋತ ಮೈಸೂರಿನ ಜನತೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸೆಸ್ಕ್‌) ವತಿಯಿಂದ ಆಯೋಜಿಸಿದ್ದ ಡ್ರೋನ್‌ ಪ್ರದರ್ಶನ ಎರಡನೇ ದಿನವಾದ ಸೋಮವಾರವೂ ನೋಡುಗರನ್ನು ವಿಸ್ಮಯಗೊಳಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ರಾಜ್ಯದಲ್ಲೇ ಹಾಗೂ ಮೈಸೂರು ದಸರೆಯಲ್ಲಿ ಮೊದಲ ಬಾರಿಗೆ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿಯ ಜನರಿಗೆ ಮರೆಯಲಾಗದ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್‌ ಶೋನಲ್ಲಿ 1500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ರಾತ್ರಿ 7:45ಕ್ಕೆ ಆರಂಭಗೊಂಡ ಡ್ರೋನ್‌ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು.

ಮೊದಲ ದಿನವಾದ ಅ.6ರ ಭಾನುವಾರ ನಡೆದ ಆಕರ್ಷಕ ಡ್ರೋನ್‌ ಪ್ರದರ್ಶನ ವೀಕ್ಷಿಸಲು ಸಾವಿರಾರು ಸಂಖ್ಯೆಯ ಜನರು ಸೋಮವಾರ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ಲಗ್ಗೆಯಿಟ್ಟಿದ್ದರು.

*ವಿಜಯ್‌ ಪ್ರಕಾಶ್‌ ಗಾಯಕ:*
ಎರಡನೇ ದಿನದ ಡ್ರೋನ್‌ ಪ್ರದರ್ಶನದ ಅಂಗವಾಗಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನತಣಿಸಿತು. ಖ್ಯಾತ ಹಿನ್ನೆಲೆ ಗಾಯನ ವಿಜಯ ಪ್ರಕಾಶ್ ಅವರು ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರಿಗೆ ಸಂಗೀತದ ಸುಧೆ ಹರಿಸಿದರು. ತಮ್ಮ ಗಾಯನದ ಹಿಟ್‌ ಗೀತೆಗಳಾದ ಖಾಲಿ ಕ್ವಾಟ್ರು ಬಾಟ್ಲಿ ಅಂಗೆ ಲೈಫು, ಕುಲದಲ್ಲಿ ಕೀಳಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ಹಲವು ಗೀತೆಗಳನ್ನು ಹಾಡಿ ರಂಜಿಸಿದರು. ವಿಜಯ್‌ ಪ್ರಕಾಶ್‌ ಅವರು ದಿ. ಪುನೀತ್‌ ರಾಜಕುಮಾರ್‌ ಅವರ ಗೊಂಬೆ ಹೇಳುತೈತೆ ಹಾಡಿಗೆ ಇಡೀ ಮೈದಾನವೇ ತಲೆದೂಗಿತು.

ಕಾರ್ಯಕ್ರಮದಲ್ಲಿ ಶಾಸಕ ಡಿ. ರವಿಶಂಕರ್‌, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ‌ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *